ಸುರಕ್ಷಿತ ಸಂಕ ನಿರ್ಮಾಣಕ್ಕೆ ಅಧಿಕಾರಿಗಳು ಕಣ್ತೆರೆಯಲು ಇನ್ನೆಷ್ಟು ಜೀವ ಹಾನಿಯಾಗಬೇಕು- ಬಾಳಗದ್ದೆ ಪರಿಸರ ನಿವಾಸಿಗಳ ಅಳಲು
ಕುಂಬ್ಡಾಜೆ: ಕೂಲಿ ಕಾರ್ಮಿಕ ನಾಪತ್ತೆಯಾದಾಗ ಸ್ಥಳೀಯರು ವ್ಯಕ್ತಪಡಿಸಿದ ಶಂಕೆ ನಿಜವಾಗಿದೆ. ಆ ದುರಂತ ಸಂಭವಿಸದಿರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದರೂ, ಕಂಗಿನ ಕಾಲು ಸಂಕದಲ್ಲಿ ದಾಟುತ್ತಿದ್ದಾಗ ನೀರಿಗೆ ಬಿದ್ದು ಮೃತಪಟ್ಟ ದುರಂತ ಸಂಭವಿಸಿ ಹೋಯಿತು. ಕಾಯಿಮಲೆ- ಪೆರ್ವತ್ತೋಡಿಯಲ್ಲಿ ತೋಡಿಗೆ ಸುರಕ್ಷಿತ ಸಂಕ ನಿರ್ಮಿಸಬೇಕೆಂಬ ಸ್ಥಳೀಯರ ಹಲವು ಕಾಲದ ಬೇಡಿಕೆ ಇನ್ನೂ ಈಡೇರಿಲ್ಲ. ಇನ್ನೆಷ್ಟು ಜೀವ ಈ ಕಾಲು ಸಂಕದಿಂದ ಬಿದ್ದು ಹಾನಿಯಾದರೆ ಇಲ್ಲಿ ಸುರಕ್ಷಿತ ಸಂಕ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗುವರೋ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.
ಕಳೆದ ೨೮ರಂದು ನಾಪತ್ತೆಯಾಗಿದ್ದ ಬಾಳೆಗದ್ದೆ ನಿವಾಸಿ ಕೂಲಿ ಕಾರ್ಮಿಕ ನಾರಾಯಣ ಮಣಿಯಾಣಿ (48) ಕಾಲು ಸಂಕದಿಂದ ಬಿದ್ದು ಮೃತಪಟ್ಟ ದುರ್ದೈವಿ. ಇಲ್ಲಿ ಈ ಮೊದಲು ಕೂಡಾ ತೋಡಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಸಾವು ಸಂಭವಿಸಿದೆ. ಅಲ್ಲದೆ ಹಲವು ಮಂದಿ ಬಿದ್ದು ಗಾಯಗೊಂಡು, ಕೈಕಾಲು ಮುರಿದ ಘಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಶಾಶ್ವತ, ಸುರಕ್ಷಿತ ಸಂಕಕ್ಕಾಗಿ ಸ್ಥಳೀಯರು ಬೇಡಿಕೆ ಒಡ್ಡಲಾರಂಭಿಸಿ ಹಲವು ಕಾಲಗಳು ಕಳೆಯಿತು. ಆದರೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ಮಾತ್ರ ನೀಡುತ್ತಿದ್ದಾರಲ್ಲದೆ ಯಾವುದೇ ಕ್ರಮ ಉಂಟಾಗುತ್ತಿಲ್ಲವೆಂದು ಸ್ಥಳೀಯರು ದೂರುತ್ತಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಸ್ಥಳೀಯಾಡಳಿತ ಚುನಾವಣೆ ಆಗಮಿಸಲಿದೆ. ಈ ವೇಳೆ ಮತಯಾಚಿಸಿ ವಿವಿಧ ಪಕ್ಷಗಳ ಪ್ರತಿನಿಧಿಗಳು ಇಲ್ಲಿಗೆ ತಲುಪುವುದು ಸಾಮಾನ್ಯವಾಗಿದೆ. ಆದರೆ ಸ್ಥಳೀಯರ ಬೇಡಿಕೆಯನ್ನು ಈಡೇರಿಸದ ರಾಜಕೀಯದ ಮುಖಂಡರಿಗೆ ಇಲ್ಲಿನವರು ಸೂಕ್ತ ತಿರುಗೇಟು ನೀಡಲು ಸಜ್ಜಾಗುತ್ತಿದ್ದಾರೆಂದು ಸ್ಥಳೀಯರು ತಿಳಿಸುತ್ತಾರೆ.
ದಿನಂಪ್ರತಿ ಮಕ್ಕಳು, ಹಿರಿಯರು ಎನ್ನದೆ ನೂರಾರು ಮಂದಿ ಬೇರೆ ದಾರಿ ಇಲ್ಲದೆ ಸಂಚರಿಸಬೇಕಾಗುತ್ತಿರುವ ಈ ಕಾಲು ಸಂಕವನ್ನು ಇನ್ನಾದರೂ ಸುರಕ್ಷಿತವಾಗಿ ನಿರ್ಮಿಸಿ, ಜನರ ಸಂಚಾರ ಸ್ವಾತಂತ್ರ್ಯವನ್ನು ಸುಗಮಗೊಳಿಸಬೇಕೆಂದು ಆಗ್ರಹಿಸಿದ್ದಾರೆ.