ಸೇನಾ ವೇಷದಲ್ಲಿ ಮಾವೋವಾದಿಗಳು ಮತ್ತೆ ಪ್ರತ್ಯಕ್ಷ: ವ್ಯಾಪಕ ಪೊಲೀಸ್ ಕಾರ್ಯಾಚರಣೆ
ಕಾಸರಗೋಡು: ಕಣ್ಣೂರಿನ ಜಿಲ್ಲೆಯ ಕೇಳಗಂ ಪಿಎಚ್‌ಸಿಗೆ ಸಮೀಪದ ಬುಡಕಟ್ಟು ಜನಾಂಗದ ವರು ವಾಸಿಸುತ್ತಿರುವ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆಯ ಸಮವಸ್ತ್ರವನ್ನು ಹೋಲುವ ಬಟ್ಟೆ ಧರಿಸಿದ ಐವರನ್ನೊಳಗೊಂಡ ಮಾವೋವಾದಿ ತಂಡ ಪ್ರತ್ಯಕ್ಷಗೊಂಡಿದೆ.
ಕನ್ನಡ ಮತ್ತು ತಮಿಳು ಮಿಶ್ರಿತ ಮಲಯಾಳಂ ಭಾಷೆಯಲ್ಲಿ ಮಾತ ನಾಡುವ ಈ ಮಾವೋವಾದಿಗಳು, ಆ ಪ್ರದೇಶದ ಮನೆ ಮಾಲಕನೋರ್ವನ ಬಳಿ ಬಂದು ನಿಮ್ಮ ಮನೆಯಲ್ಲಿ ನಮಗೆ ಸೇವಿಸಲು ಯಾವುದಾದರೂ ಆಹಾರ ಸಿಗಬಹುದೇ ಎಂದು ಕೇಳಿದ್ದರು. ಆದರೆ ಮಾಲಕನ ಮನೆ ಅಲ್ಲಿಂದ ತುಂಬಾ ದೂರವಿರುವುದನ್ನು ತಿಳಿದ ಮಾವೋವಾದಿಗಳು ಅಲ್ಲಿಗೆ ಹೋದಲ್ಲಿ ಅಪರಿಚಿತರಾದ ನಮ್ಮನ್ನು ಯಾರಾದರೂ ಕಾಣುವ ಸಾಧ್ಯತೆಯಿದೆಯೆಂದು ತಿಳಿದು ತಕ್ಷಣ ಅಲ್ಲಿಂದ ಜಾಗ ಖಾಲಿಮಾಡಿದ್ದಾರೆ. ಆ ಬಗ್ಗೆ ಪರಿಸರ ನಿವಾಸಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಮತ್ತು ನಕ್ಸಲ್ ನಿಗ್ರಹಪಡೆ (ತಂಡರ್ ಬೋಲ್ಟ್) ಆ ಪ್ರದೇಶವನ್ನಿಡೀ ಜಾಲಾಡಿದರೂ ಮಾವೋವಾದಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಕೇಳಗಕ್ಕೆ ಆಗಮಿಸಿದ ಮಾವೋವಾದಿ ತಂಡದವರ ಕೈಯಲ್ಲಿ ಬಟ್ಟೆಯಲ್ಲಿ ಹೊದಿಸಲಾದ ಕೋವಿಗಳು ಇತ್ತೆಂದೂ ಸಂಶಯಿಸಲಾಗಿದೆ.
ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನವಕೇರಳ ಯಾತ್ರೆ ನಡೆಯುತ್ತಿರುವ ವೇಳೆಯಲ್ಲೇ ಮಾವೋವಾದಿಗಳು ಪ್ರತ್ಯಕ್ಷಗೊಳ್ಳತೊಡಗಿರುವುದನ್ನು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಇದರಿಂದಾಗಿ ನವಕೇರಳ ಯಾತ್ರೆಗೆ ನೀಡಲಾದ ಪೊಲೀಸ್ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಕಣ್ಣೂರು-ಕೊಡಗು ಜಿಲ್ಲೆಗಳ ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಪೊಲೀಸರು ಮತ್ತು ಮಾವೋವಾದಿಗಳ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಅದರಲ್ಲಿ ಕೆಲವು ಮಾವೋವಾದಿಗಳು ಗಾಯಗೊಂಡಿದ್ದರು. ಇಬ್ಬರು ಮಾವೋವಾದಿ ಗಳನ್ನು ಪೊಲೀಸರು ಸೆರೆಹಿಡಿಯುವಲ್ಲಿ ಸಫಲರಾಗಿದ್ದರು. ಅದರ ಬೆನ್ನಲ್ಲೇ ನಿನ್ನೆ ಮಾವೋವಾದಿ ಗಳು ಮತ್ತೆ ಪ್ರತ್ಯಕ್ಷ ಗೊಂಡಿದ್ದು, ಅವರ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ.