ಸೋಂಕಾಲ್ ನಿವಾಸಿ ಅಲ್ತಾಫ್ನನ್ನು ಅಪಹರಿಸಿ ಕೊಲೆ : ತಲೆಮರೆಸಿಕೊಂಡಿದ್ದ ದ್ವಿತೀಯ ಆರೋಪಿ ಸೆರೆ
ಉಪ್ಪಳ: ಸೋಂಕಾಲ್ನ ಅಲ್ಪಾಫ್ (52)ನನ್ನು ಅಪಹರಿಸಿ ಕೊಂಡು ಹೋಗಿ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಜಾಮೀನು ಲಭಿಸಿ ತಲೆಮರೆಸಿಕೊಂಡಿದ್ದ ದ್ವಿತೀಯ ಆರೋಪಿ ಸೆರೆಯಾಗಿದ್ದಾನೆ. ಕುಬಣೂರಿನ ರಿಯಾಸ್ ಯಾನೆ ಪಡಪ್ಪ್ ರಿಯಾಸ್ (32)ನನ್ನು ಕುಂಬಳೆ ಎಸ್ಐ ಕೆ. ರಾಜೀವ್ ಹಾಗೂ ತಂಡ ಬಂಧಿಸಿದೆ. 2019 ಜೂನ್ 23ರಂದು ಅಲ್ತಾಫ್ನನ್ನು ಅಪಹರಿಸಲಾಗಿತ್ತು. ಕೊಲೆಗೀಡಾದ ಅಲ್ತಾಫ್ನ ಪತ್ನಿಗೆ ಮೊದಲ ಪತಿಯಲ್ಲಿ ಹುಟ್ಟಿದ ಪುತ್ರಿ ಆಮಿನತ್ ಸರೀನಳ ಪತಿ, ಸೋಂಕಾಲ್ ನಿವಾಸಿಯಾದ ಶಬೀರ್ ಮೊಯ್ದೀನ್, ಈತನ ಗೆಳೆಯರಾದ ಲತೀಫ್, ರಿಯಾಸ್ ಸಹಿತ ಐದು ಮಂದಿ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ಮೊದಲು ಪೊಲೀಸರಿಗೆ ನೀಡಿದ ದೂರಿನ ದ್ವೇಷದಿಂದ ಅಲ್ತಾಫ್ನನ್ನು ಅಪಹರಿಸಿ ಕರ್ನಾಟಕದ ವಿವಿಧ ಸ್ಥಳಗಳಿಗೆ ಕೊಂಡುಹೋಗಿ ಹಲ್ಲೆಗೈದು ಸ್ಥಿತಿ ಗಂಭೀರವಾದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ ಪರಾರಿಯಾಗಿರುವುದಾಗಿ ಕೇಸು ದಾಖಲಿಸಲಾಗಿತ್ತು. ಕೊಲೆ ಪ್ರಕರಣದಲ್ಲಿ ರಿಯಾಸ್ ಸಹಿತದವರನ್ನು ಬಂಧಿಸಲಾಗಿತ್ತು. ಬಳಿಕ ರಿಯಾಸ್ ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.