ಸೌಮ್ಯ ಹಂತಕ ಜೈಲು ಹಾರಿದ ಹಿನ್ನೆಲೆ: ಬಂಧೀಖಾನೆಗಳ ಭದ್ರತೆ ಅವಲೋಕನ ತುರ್ತು ಸಭೆ ಕರೆದ ಮುಖ್ಯಮಂತ್ರಿ

ತಿರುವನಂತಪುರ: ಸೌಮ್ಯ ಕೊಲೆ ಪ್ರಕರಣದಲ್ಲಿ ಜೀವಾವಧಿ ಸಜೆಗೊಳಗಾದ  ಆರೋಪಿ ತಮಿಳುನಾಡಿನ ಗೋವಿಂದಚ್ಚಾಮಿ ನಿನ್ನೆ ಬೆಳಿಗ್ಗೆ ಅತೀವ ಭದ್ರತೆ ಹೊಂದಿರುವ ಕಣ್ಣೂರು ಸೆಂಟ್ರಲ್  ಜೈಲಿನಿಂದ ಹಾರಿದ ಘಟನೆಯನ್ನು  ರಾಜ್ಯ ಸರಕಾರ  ಅತೀವ ಗಂಭೀರವಾಗಿ ಪರಿಗಣಿಸಿದೆ. ಆ ಹಿನ್ನೆಲೆಯಲ್ಲಿ  ರಾಜ್ಯದ ಬಂಧೀಖಾನೆಗಳ ಭದ್ರತೆ ಬಗ್ಗೆ ಅವಲೋಕನ ನಡೆಸಲು ಗೃಹಸಚಿವರೂ ಆಗಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಇಂದು ಬೆಳಿಗ್ಗೆ ತುರ್ತು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ರಾಜ್ಯದ ಬಂಧೀಖಾನೆ ಇಲಾಖೆಯ ಮುಖ್ಯಸ್ಥರು, ಗೃಹ ಕಾರ್ಯದರ್ಶಿ ಹಾಗೂ ಪೊಲೀಸ್ ಇಲಾಖೆಯ ವರಿಷ್ಠ ಪೊಲೀಸ್ ಅಧಿಕಾರಿಗಳೂ ಭಾಗವಹಿಸುತ್ತಿದ್ದಾರೆ. ಜೈಲುಗಳ ಆವರಣದಲ್ಲಿ ಗಂಭೀರ ಪ್ರಕರಣಗಳ ಆರೋಪಿಗಳನ್ನು ಕೂಡಿ ಹಾಕಲಾಗಿರುವ ಅತೀವ ಭದ್ರತೆ ಹೊಂದಿರುವ ಸೆಂಟ್ರಲ್ ಜೈಲುಗಳಲ್ಲಿನ ಭದ್ರತಾ ಲೋಪಗಳ ಬಗ್ಗೆ ಸಭೆಯಲ್ಲಿ ಗಂಭೀರ ರೀತಿಯ ಚರ್ಚೆ ನಡೆಯುತ್ತಿದೆ.

ಗೋವಿಂದಚ್ಚಾಮಿ ಜೈಲು ಹಾರಿದ  ಹಿನ್ನೆಲೆಯಲ್ಲಿ  ಜೈಲಿನಲ್ಲಿ ಉಂಟಾಗಿರುವ  ಗಂಭೀರ ಲೋಕದೋಷಗಳ ಹಿನ್ನೆಲೆಯಲ್ಲಿ ಕಣ್ಣೂರು ಸೆಂಟ್ರಲ್  ಜೈಲಿನ ಡೆಪ್ಯುಟಿ ಪ್ರಿಸನ್ ಆಫೀಸರ್ ಎ.ಕೆ. ರಜೀಶ್ ಅಸಿಸ್ಟೆಂಟ್ ಪ್ರಿಸನ್ ಆಫೀಸರ್‌ಗಳಾದ ಅಖಿಲ್ ಚಾರಿಟ್, ಎನ್. ಸಂಜಯ್ ಎಂಬವರನ್ನು ಉತ್ತರ ವಲಯ ಬಂಧೀಖಾನೆ ಡಿಐಜಿ ವಿ. ಜಯಕುಮಾರ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಇದರ ಹೊರತಾಗಿ ಈ ಜೈಲಿನ ರಾತ್ರಿ ವೇಳೆಯ ಭದ್ರತಾ ಹೊಣೆಗಾರಿಕೆ ಹೊಂದಿರುವ ಜೈಲಿನ ಅಸಿಸ್ಟೆಂಟ್ ಸುಪರಿನ್‌ಟೆಂಡೆಂಟ್ ರಿಜೋರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಡಿಜಿಪಿಯವರು ಗೃಹ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

ನಿನ್ನೆ ಮುಂಜಾನೆ ಜೈಲು ಹಾರಿದ  ನಂತರ ಗೋವಿಂದಚ್ಚಾಮಿಯನ್ನು ಪೊಲೀಸರು ನಡೆಸಿದ  ಕ್ಷಿಪ್ರ ಕಾಯಾ ಚರಣೆಯಲ್ಲಿ ಕಣ್ಣೂರು ನಗರದ ತಲ್ಲಾಪ್‌ನ ನಿರ್ಜನ ಹಿತ್ತಿಲೊಂದರ ಬಾವಿಯಿಂದ ಸೆರೆಹಿಡಿಯಲಾಗಿತ್ತು.  ಜೈಲು ಹಾರಿದ ಆತ ಬಳಿಕ ಬಾವಿಯಲ್ಲಿ ಅವಿತುಕುಳಿತಿದ್ದನು. ಸಿಸಿ  ಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ಆತನನ್ನು ಅಲ್ಲಿಂದ   ಸೆರೆಹಿಡಿಯುವಲ್ಲಿ ಸಫಲರಾಗಿದ್ದರು.

ಹಂತಕ ಗೋವಿಂದಚ್ಚಾಮಿ ಕಣ್ಣೂರಿನಿಂದ ವೀಯೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರ

ಕಣ್ಣೂರು: ಕಣ್ಣೂರು ಸೆಂಟ್ರಲ್ ಜೈಲಿನಿಂದ ನಿನ್ನೆ ಮುಂಜಾನೆ ಹಾರಿದ ಬಳಿಕ ಕೆಲವೇ ತಾಸುಗಳೊಳಗಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಶೊರ್ನೂರಿನ ಸೌಮ್ಯ ಕೊಲೆ ಪ್ರಕರಣದ ಆರೋಪಿ ಗೋವಿಂದಚ್ಚಾಮಿಯನ್ನು ಕಣ್ಣೂರು ಸೆಂಟ್ರಲ್ ಜೈಲಿನಿಂದ  ವೀಯೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಇದರಂತೆ ಕಣ್ಣೂರು ಸೆಂಟ್ರಲೈ ಜೈಲಿನಿಂದ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಇಂದು ಬೆಳಿಗ್ಗೆ ಆತನನ್ನು ವಾಹನದಲ್ಲಿ ವೀಯೂರಿಗೆ ಸಾಗಿಸಲಾಯಿತು.

You cannot copy contents of this page