ಸ್ಕೂಟರ್‌ನಿಂದ ರಸ್ತೆಗೆ ಬಿದ್ದ ಯುವತಿಯ ದೇಹದ ಮೇಲೆ ಕಂಟೈನರ್ ಲಾರಿ ಚಲಿಸಿ ದಾರುಣ ಮೃತ್ಯು
ಕಾಸರಗೋಡು: ಸಂಚರಿಸುತ್ತಿದ್ದ ಸ್ಕೂಟರ್‌ನಿಂದ ರಸ್ತೆಗೆ ಬಿದ್ದ ಯುವತಿಯ ದೇಹದ ಮೇಲೆ ಕಂಟೈನರ್ ಲಾರಿ ಸಂಚರಿಸಿ ಯುವತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಚಟ್ಟಂಚಾಲ್ ಟಾಟಾ ಕೋವಿಡ್ ಆಸ್ಪತ್ರೆ ಬಳಿಯ ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಿನ್ನೆ ಸಂಜೆ ಈ ಅಪಘಾತ ಸಂಭವಿಸಿದೆ. ಪೈಕ ಚಂದ್ರಂಪ್ಪಾರ ನಿವಾಸಿ ಮಣಿ ಎಂಬವರ ಪತ್ನಿ ಶಶಿಕಲ (30) ಎಂಬವರು ಸಾವನ್ನಪ್ಪಿದ ದುರ್ದೈವಿಯಾ ಗಿದ್ದಾರೆ. ನಿನ್ನೆ ರಾತ್ರಿ 7.30 ರ ವೇಳೆ ಚಟ್ಟಂಚಾಲ್- ಚೆರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆಕ್ಕಿಲ್‌ನ ಏರು ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಶಶಿಕಲಾ ಪತಿ ಮಣಿ ಹಾಗೂ ಇಬ್ಬರು ಮಕ್ಕಳೊಂದಿಗೆ ಚೆರ್ಕಳ ಭಾಗದಿಂದ ಚಟ್ಟಂಚಾಲ್‌ನ ಕ್ಲಿನಿಕ್‌ಗೆ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ತೆಕ್ಕಿಲ್ ಏರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಂಟೈನರ್ ಲಾರಿ ದಿಢೀರ್ ಹಿಂದಕ್ಕೆ ಚಲಿಸಿದಾಗ ಅದರ ಹಿಂಭಾಗದಲ್ಲಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಸ್ಕೂಟರ್‌ನ ಹಿಂಬದಿ ಕುಳಿತಿದ್ದ ಶಶಿಕಲ ರಸ್ತೆಗೆಸೆಯಲ್ಪಟ್ಟಿದ್ದರು.
ಈ ವೇಳೆ ಕಂಟೈನರ್ ಲಾರಿಯ ಚಕ್ರ ಅವರ ದೇಹದ ಮೇಲೆ ಚಲಿಸಿದೆ. ಇದರಿಂದ ಗಂಭೀರ ಗಾಯಗೊಂಡ ಶಶಿಕಲರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಸ್ಕೂಟರ್‌ನಲ್ಲಿದ್ದ ಇವರ ಪತಿ ಮಣಿ, ಮಕ್ಕಳಾದ ಆರಾಧ್ಯ (4), ಆದಿ (ಒಂದೂವರೆ ವರ್ಷ) ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.
ಶಶಿಕಲರ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಅಪಘಾತ ಉಂಟಾದಾಗ ಲಾರಿ ಚಾಲಕ ಮತ್ತು ಕ್ಲೀನರ್ ಅಲ್ಲಿಂದ ಪರಾರಿಯಾಗಿದ್ದಾರೆ. ಮೇಲ್ಪರಂಬ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕರ್ನಾಟಕದ ಆರ್ಲಪದವಿನ ಬಂಬ ಮಣಿಯಾಣಿ- ರತ್ನಾವತಿ ದಂಪತಿಯ ಪುತ್ರಿಯಾದ ಶಶಿಕಲ ಪತಿ, ಮಕ್ಕಳ ಹೊರತಾಗಿ ಸಹೋದರ ಸಹೋದರಿಯರಾದ ಭಾಸ್ಕರ, ಅನ್ನಪೂರ್ಣ, ಶಾರದ, ಭವಾನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.