ಸ್ಟೀಲ್ ಬಾಂಬ್ ಸಿಡಿದು ವೃದ್ದ ಸಾವನ್ನಪ್ಪಿದ ಪ್ರಕರಣ :ವಿಧಾನಸಭೆಯಲ್ಲಿ ವಿಪಕ್ಷಗಳ ಸದ್ದುಗದ್ದಲ; ಸಮಗ್ರ ತನಿಖೆ ನಡೆಸಲಾಗುವುದು,

ಆದರೆ ಸದನದಲ್ಲಿ ಚರ್ಚೆ ಇಲ್ಲ- ಸಿಎಂ

ತಿರುವನಂತಪುರ: ಕಣ್ಣೂರು ತಲಶ್ಶೇರಿಯ ಎರಂಜೋಲಿಯ ಗ್ರಾಮ ಪಂಚಾಯತ್‌ನ ಸಮೀಪದ ಕುಟ್ಟಕಳಂನ ಅನಿಯೋಟ್ ಮೀತಲ್ ಪರಂಬ್‌ನಲ್ಲಿ ನಿನ್ನೆ ಮಧ್ಯಾಹ್ನ ಸ್ಟೀಲ್ ಬಾಂಬ್ ಸ್ಫೋಟಗೊಂಡು ವೇಲಾಯುಧನ್ (85) ಎಂಬವರು ದಾರುಣವಾಗಿ ಸಾವನ್ನಪ್ಪಿದ ಘಟನೆಯ ಕಾವು ಇಂದು ಬೆಳಿಗ್ಗೆ ರಾಜ್ಯ ವಿಧಾನಸಭೆಯಲ್ಲೂ ಸದ್ದುಗದ್ದಲ ಸೃಷ್ಟಿಸಿತು.

ವಿಧಾನಸಭೆ ಇಂದು ಬೆಳಿಗ್ಗೆ ಆರಂಭಗೊಂಡಂತೆಯೇ ಸದನದ ಇತರ ಕಲಾಪಗಳನ್ನು ಬದಿಗಿರಿಸಿ ತಲಶ್ಶೇರಿ ಯಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕೆಂದು ವಿಪಕ್ಷ ನಾಯಕ ವಿ.ಡಿ. ಸತೀಶನ್ ಸೇರಿದಂತೆ ವಿಪಕ್ಷದ ಹಲವರು ಆಗ್ರಹಿಸಿದರು. ಅದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಾಂಬ್ ಸ್ಫೋಟದ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಅದರ ಮೂಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಮಾತ್ರವಲ್ಲ ತನಿಖೆಯಂಗವಾಗಿ ವ್ಯಾಪಕ ದಾಳಿಯನ್ನೂ ನಡೆಸಲಾಗುತ್ತಿದೆ. ತಪ್ಪೆಸಗಿದವರು ಯಾರೇ ಆಗಿದ್ದರೂ  ಅವರನ್ನು ಸರಕಾರ ಸುಮ್ಮಗೆ ಬಿಡದು. ಆದರೆ ಈ ಬಾಂಬ್ ಸ್ಫೋಟಕ್ಕೆ ರಾಜ ಕೀಯ ಬಣ್ಣ ನೀಡುವುದು ಸರಿಯಲ್ಲ ವೆಂದೂ ಮುಖ್ಯಮಂತ್ರಿ ತಿಳಿಸಿದರು, ಮಾತ್ರವಲ್ಲದೆ ಈ ವಿಷಯದ ಬಗ್ಗೆ ಸದನದ ಇತರ ಕಲಾಪಗಳನ್ನು ಬದಿಗರಿಸಿ ಚರ್ಚೆ ನಡೆಸಬೇಕಾದ ಅಗತ್ಯವಿಲ್ಲವೆಂದು ಅವರು ಹೇಳಿದರು. ಅದರಂತೆ ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂಬ ವಿಪಕ್ಷೀಯರ ಬೇಡಿಕೆಯನ್ನು ವಿಧಾನಸಭಾ ಅಧ್ಯಕ್ಷರು ನಿರಾಕರಿಸಿದರು.ಸರಕಾರದ ಇಂತಹ ನಿಲುವನ್ನು ಪ್ರತಿಭಟಿಸಿ ವಿಪಕ್ಷೀಯರು ಸದನದಲ್ಲಿ ಸದ್ದುಗದ್ದಲ ಎಬ್ಬಿಸಿದರು ಮಾತ್ರವಲ್ಲದೆ, ಸಿಪಿಎಂ ಬಾಂಬ್ ಆಯುಧ ಸಂಸ್ಕೃತಿಯನ್ನು ಕೈ ಬಿಡಬೇಕೆಂದೂ ಅವರು ಆಗ್ರಹಿಸಿದರು.

Leave a Reply

Your email address will not be published. Required fields are marked *

You cannot copy content of this page