ಸ್ನೇಹಿತನನ್ನು ಕಾಣಲೆಂದು ತಿಳಿಸಿ ಹೋದ ವ್ಯಕ್ತಿ ನಿಗೂಢ ನಾಪತ್ತೆ

ಉಪ್ಪಳ: ಸ್ನೇಹಿತನನ್ನು ಭೇಟಿಯಾಗಲೆಂದು ತಿಳಿಸಿಹೋದ ವ್ಯಕ್ತಿ ಬಳಿಕ ಮನೆಗೆ ಮರಳದೆ ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ. ಧರ್ಮತ್ತಡ್ಕ ನಿವಾಸಿ ಜೋನ್ ಡಿಸೋಜ (೬೦) ಎಂಬವರು ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಅವರ ಪತ್ನಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಜೋನ್ ಡಿಸೋಜಾ ನಿನ್ನೆ ಬೆಳಿಗ್ಗೆ ೬ ಗಂಟೆಗೆ ಪೆರ್ಮುದೆಯಲ್ಲಿರುವ ಸ್ನೇಹಿತ ಜೋಸೆಫ್ ಎಂಬವರನ್ನು ಭೇಟಿಯಾಗಲೆಂದು ತಿಳಿಸಿ ಸ್ಕೂಟರ್‌ನಲ್ಲಿ ತೆರಳಿದ್ದಾರೆನ್ನಲಾಗಿದೆ. ಆದರೆ ಅನಂತರ ಮನೆಗೆ ಮರಳಿ ಬಂದಿಲ್ಲ. ಈ ಬಗ್ಗೆ ಪೆರ್ಮುದೆಯ ಸ್ನೇಹಿತನಿಗೆ ಮನೆಯವರು ಪೋನ್ ಕರೆ ಮಾಡಿ ವಿಚಾರಿಸಿದಾಗ ಜೋನ್ ಡಿಸೋಜ ಬೆಳಿಗ್ಗೆ ೭ ಗಂಟೆಗೆ ಮರಳಿರುವುದಾಗಿ ತಿಳಿಸಿದ್ದಾರೆ. ಅನಂತರ ಜೋನ್ ಡಿಸೋಜರ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ಆಫ್ ಆಗಿರುವುದಾಗಿ ತಿಳಿದು ಬಂದಿದೆ. ಆದ್ದರಿಂದ ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಪತ್ನಿ ಡೆಲ್ಸಿನ್ ಮೊಂತೆರೋ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ಸೈಬರ್ ಸೆಲ್‌ನ ಸಹಾಯದಿಂದ ಶೋಧ ನಡೆಸಿದಾಗ ಮೊಬೈಲ್ ಫೋನ್ ಅಂಬಾರು ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಕೂಡಲೇ ಪೊಲೀಸರು ಅಲ್ಲಿಗೆ ತೆರಳಿ ಹುಡುಕಿದಾಗ ಜೋನ್ ಡಿಸೋಜರ ಸ್ಕೂಟರ್ ಹಾಗೂ ಮೊಬೈಲ್ ಫೋನ್  ರಸ್ತೆ ಬದಿ ಪತ್ತೆಯಾಗಿದೆ. ಸ್ಕೂಟರ್‌ನ ಕೀಲಿ ಕೈಯನ್ನು ಅದರಲ್ಲೇ ಇರಿಸಲಾಗಿತ್ತು. ಅವುಗಳನ್ನು ಪೊಲೀಸರು ಕಸ್ಟಡಿಗೆ ತೆಗೆದು ಠಾಣೆಗೆ ತಲುಪಿಸಿದ್ದಾರೆ. ಆದರೆ ಸ್ಕೂಟರ್ ಹಾಗೂ ಮೊಬೈಲ್‌ನ್ನು ಉಪೇಕ್ಷಿಸಿ ಜೋನ್ ಡಿಸೋಜಾ ಎಲ್ಲಿಗೆ ತೆರಳಿದ್ದಾರೆಂದು ತಿಳಿದು ಬಂದಿಲ್ಲ. ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page