ಕಾಸರಗೋಡು: ಸ್ನೇಹಿತೆಯ ಮನೆಗೆಂದು ತಿಳಿಸಿ ಮನೆಗಳಿಂದ ಹೋದ ಯುವತಿಯರು ಇಬ್ಬರು ಯುವಕರೊಂದಿಗೆ ಮಾದಕವಸ್ತು ಬಳಸುತ್ತಿದ್ದ ವೇಳೆ ಲಾಡ್ಜ್ ಕೊಠಡಿಯಲ್ಲಿ ಅಬಕಾರಿ ಅಧಿಕಾರಿಗಳ ಸೆರೆಗೀಡಾಗಿದ್ದಾರೆ. ಮಟ್ಟನ್ನೂರು ಮರುದಾಯಿ ನಿವಾಸಿ ಮುಹಮ್ಮದ್ ಶಮ್ನಾದ್ (23), ವಳಪಟ್ಟಣದ ಮುಹಮ್ಮದ್ ಜಂಶೀಲ್ (37), ಇರಿಕ್ಕೂರ್‌ನ ರಫೀನ (24), ಕಣ್ಣೂರಿನ ಜಸೀನ (22) ಎಂಬಿವರನ್ನು ತಳಿಪರಂಬ ಅಬಕಾರಿ ಸರ್ಕಲ್ ಇನ್‌ಸ್ಪೆಕ್ಟರ್ ಶಿಜಿಲ ಕುಮಾರ್ ನೇತೃತ್ವದ ತಂಡ ಸೆರೆಹಿಡಿದಿದೆ. ಪರಶ್ಶಿನಿ ಕೋಲ್‌ಮೊಟ್ಟದಲ್ಲಿರುವ ಲಾಡ್ಜ್‌ನಲ್ಲಿ ನಡೆಸಿದ ತಪಾಸಣೆ ವೇಳೆ ಯುವಕರು ಹಾಗೂ ಯುವತಿಯರು ಸೆರೆಗೀಡಾಗಿದ್ದಾರೆ. ಇವರಿಂದ 490 ಮಿಲ್ಲಿ ಗ್ರಾಂ ಎಂಡಿಎಂಎ, ಟೆಸ್ಟ್ ಟ್ಯೂಬ್, ಲಾಂಬ್ ಮೊದಲಾದ ವುಗಳನ್ನು ವಶಪಡಿಸಲಾಗಿದೆ. ಈದುಲ್ ಫಿತೃ ಹಬ್ಬದ ದಿನದಂದು ಸ್ನೇಹಿತೆಯ ಮನೆಗೆ ಹೋಗುವುದಾಗಿ ತಿಳಿಸಿ ಯುವತಿಯರು ಮನೆಯಿಂದ ತೆರಳಿದ್ದರು. ಅನಂತರ ಇವರು ಹಲವು ಕಡೆಗಳಿಗೆ ತಲುಪಿ ಲಾಡ್ಜ್‌ನಲ್ಲಿ ಕೊಠಡಿ ಪಡೆದು ಮಾದಕವಸ್ತು ಉಪಯೋ ಗಿಸಿರುವುದಾಗಿ ತಿಳಿದುಬಂದಿದೆ ಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮನೆಯಿಂದ ಕರೆಮಾಡಿದಾಗ ಯುವತಿಯರು ಪರಸ್ಪರ ಮೊಬೈಲ್ ಹಸ್ತಾಂತರಿಸಿ ಮನೆಯವರಿಗೆ ತಪ್ಪು ಮಾಹಿತಿ ನೀಡಿದ್ದರು. ಯುವಕರು ಹಾಗೂ ಯುವತಿಯರು ಅಬಕಾರಿ ಅಧಿಕಾರಿಗಳ ಸೆರೆಗೀಡಾದಾಗಲೇ ಅವರು ಲಾಡ್ಜ್‌ನಲ್ಲಿರುವ ವಿಷಯ ಮನೆಯವರಿಗೆ ತಿಳಿದುಬಂದಿದೆ. ಈ ತಂಡದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂದು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್‌ಗಳಾದ ಶಾಜಿ ವಿ.ವಿ, ಅಶ್ರಫ್ ಮಲಪ್ಪಟ್ಟಂ, ಪ್ರಿವೆಂಟೀವ್ ಆಫೀಸರ್‌ಗಳಾದ ಶೆಮಿನ್, ನಿಖೇಶ್, ಸಿಇಒಗಳಾದ ವಿಜಿತ್, ಕಲೇಶ್, ಸನೇಶ್,ವಿನೋದ್, ಸುಜಿತ ಎಂಬಿವರಿದ್ದರು.
