ಹದಗೆಟ್ಟು ಸಂಚಾರ ದುಸ್ತರವಾದ ಲಾಲ್‌ಬಾಗ್-ಕುರುಡಪದವು ರಸ್ತೆ ಅಭಿವೃದ್ಧಿಗೆ ಮೀನ-ಮೇಷ: ಸ್ಥಳೀಯರಲ್ಲಿ ರೋಷ

ಪೈವಳಿಕೆ: ರಸ್ತೆ ದುರಸ್ತಿಗೆ  ನಾಲ್ಕೂವರೆ ಕೋಟಿ ರೂ. ಮಂಜೂರುಗೊಂಡು ಗುತ್ತಿಗೆದಾರ ಹಾಗೂ  ಅಧಿಕಾರಿಗಳು ಸ್ಥಳಕ್ಕೆ ತಲುಪಿ ಸ್ಥಳ ಪರಿಶೀಲಿಸಿ ಪೊದೆಗಳನ್ನು ತೆರವುಗೊಳಿಸಿ ಹಲವು ತಿಂಗಳು ಕಳೆದರೂ ಕಾಮಗಾರಿ ಆರಂಭಿಸಲು ಮೀನ-ಮೇಷ ಎಣಿಸುತ್ತಿರುವುದನ್ನು ಪ್ರತಿಭಟಿಸಿ ನಾಗರಿಕರು ಹೋರಾಟಕ್ಕೆ ಸಿದ್ಧರಾಗುತ್ತಿದ್ದಾರೆ. ಪೈವಳಿಕೆ ಪಂಚಾಯತ್‌ನ ಮಾಸಿ ಕುಮೇರಿ -ಕುರುಡಪದವು ರಸ್ತೆ  ದುರಸ್ತಿಗೊಳಿಸದ ವಿರುದ್ಧ ಸ್ಥಳೀಯರು ರೋಷ ವ್ಯಕ್ತಪಡಿಸುತ್ತಿದ್ದಾರೆ. ಹಲವು ವರ್ಷಗಳಿಂದ ರಸ್ತೆ ಹದಗೆಟ್ಟು ಹೊಂಡ ಸೃಷ್ಟಿಯಾಗಿ ವಾಹನ ಸಂಚಾರವೇ ದುಸ್ತರವಾದ ಈ ರಸ್ತೆಯ ದುರಸ್ತಿಗಾಗಿ ಸ್ಥಳೀಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ನಾಲ್ಕೂವರೆ ಕೋಟಿ ರೂ. ಹಣ ಮಂಜೂರು ಮಾಡಲಾಗಿದೆ. ಅಲ್ಲಲ್ಲಿ ತಿರುವು, ಅಗಲಕಿರಿದಾದ ಈ ರಸ್ತೆಯಲ್ಲಿ ವಾಹನ ಸಂಚಾರವೇ  ಅಪಾಯಕರವಾಗಿದ್ದು, ಅಭಿವೃದ್ಧಿಗೊಳಿಸಬೇಕೆಂದು ಸ್ಥಳೀಯರ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸಿದರೂ ದುರಸ್ತಿ ಕಾಮಗಾರಿ ಆರಂಭಗೊಳ್ಳದಿರುವುದು ಸ್ಥಳೀಯರಿಗೆ  ಸಮಸ್ಯೆಯಾಗಿದೆ. ಪಂಚಾಯತ್‌ನ 1, 2, 3, 16ನೇ ವಾರ್ಡ್‌ಗಳನ್ನು ಸಂಪರ್ಕಿಸುವ ಒಟ್ಟು ಏಳೂ ಮೂಕ್ಕಾಲು ಕಿಲೋ ಮೀಟರ್ ಸಂಪರ್ಕಿಸುವ ಈ ರಸ್ತೆ ಐದೂವರೆ ಮೀಟರ್ ಅಗಲದಲ್ಲಿ ನಿರ್ಮಿಸ ಲಾಗುವುದೆಂದು ಹೇಳಲಾಗುತ್ತಿದೆ.  ದಿನನಿತ್ಯ  ಬಸ್ ಸಹಿತ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಶೀಘ್ರವೇ ರಸ್ತೆ ದುರಸ್ತಿ ಆರಂಭಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page