ಹನುಮಾನ್ ನಗರದಲ್ಲಿ ಸಮುದ್ರದ ಅಲೆಗೆ ಕೊಚ್ಚಿ ಹೋದ ಕಾಂಕ್ರೀಟ್ ರಸ್ತೆ :ತಡೆಗೋಡೆ ನಿರ್ಮಾಣಕ್ಕೆ ಆಗ್ರಹ
ಉಪ್ಪಳ: ಹನುಮಾನ್ ನಗರದಲ್ಲಿ ಹಲವು ವರ್ಷಗಳಿಂದ ಕಾಂಕ್ರೀಟ್ ರಸ್ತೆ ಸಮುದ್ರಪಾಲಾಗುತ್ತಿದ್ದರೂ ಸೂಕ್ತ ರೀತಿಯ ತಡೆಗೋಡೆ ನಿರ್ಮಿಸಲು ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಇಲ್ಲಿನ ಮೀನುಕಾರ್ಮಿಕರು ಆರೋಪಿಸುತ್ತಾರೆ. ಕಳೆದ ವರ್ಷ ರಸ್ತೆ ಸಮುದ್ರಪಾಲಾಗಿದ್ದು, ಮೂರು ತಿಂಗಳ ಹಿಂದೆ 30 ಮೀಟರ್ ಉದ್ದದಲ್ಲಿ ರಸ್ತೆ ಪುನರ್‌ನಿರ್ಮಿಸಲಾಗಿತ್ತು. ಕಾಂಕ್ರೀಟ್ ಹಾಕಿ ನಿರ್ಮಿಸಿದ ಈ ರಸ್ತೆ ಕೂಡಾ ಕಳೆದ ಹಲವು ದಿನಗಳಿಂದ ಉಂಟಾಗಿದ್ದ ಕಡಲ್ಕೊರೆತಕ್ಕೆ ಕುಸಿದು ಬಿದ್ದಿದೆ. ಇದರಿಂದಾಗಿ ಈ ರಸ್ತೆ ಮೂಲಕ ಸಂಚಾರ ತಡೆ ಉಂಟಾಗಿದೆ. ಇದು ಇಲ್ಲಿನ ಮೀನುಕಾರ್ಮಿಕರಿಗೆ ಸಮಸ್ಯೆ ಸೃಷ್ಟಿಸಿದೆ. ಕಡಲ್ಕೊರೆತ ಮುಂದುವರಿದಲ್ಲಿ ಈ ಭಾಗದಲ್ಲಿ ನೂತನವಾಗಿ ನಿರ್ಮಿಸಿದ ರಸ್ತೆ ಹಾಗೂ ಹಲವು ಮನೆಗಳು ಸಮುದ್ರಪಾಲಾಗುವ ಭೀತಿ ಉಂಟಾಗಿದೆ. ಮುಸೋಡಿ, ಮಣಿಮುಂಡ, ಹನುಮಾನ್‌ನಗರದ ಪ್ರಧಾನ ರಸ್ತೆ ಇದಾಗಿದ್ದು, ರಸ್ತೆಯನ್ನು ಸಂರಕ್ಷಿಸಲು ಅಗತ್ಯ ಕ್ರಮ ಅಧಿಕಾರಿಗಳು ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ರಸ್ತೆ ಸಮುದ್ರಪಾಲಾಗದಂತೆ ತಡೆಯಲು ತಡೆಗೋಡೆಯನ್ನು ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.