ಕುಂಬಳೆ: ಕಳ್ಳಕೋವಿ ಹಾಗೂ ಮದ್ದು ಗುಂಡುಗಳ ಸಹಿತ ಹಲವಾರು ಪ್ರಕರಣಗಳಲ್ಲಿ ಆರೋಪಿಯಾದ ಯುವಕನನ್ನು ಪೊಲೀಸರು ಬಂಧಿಸಿ ದ್ದಾರೆ. ಮಂಗಲ್ಪಾಡಿ ಚೆರುಗೋಳಿಯ ನೌಮಾನ್ ಯಾನೆ ಪಾಂಬ್ ನೌಮಾನ್ (26) ಎಂಬಾತನನ್ನು ಕುಂಬಳೆ ಎಸ್ಐ ಕೆ. ಶ್ರೀಜೇಶ್ ನೇತೃತ್ವದ ತಂಡ ಬಂಧಿಸಿದೆ. ಶನಿವಾರ ರಾತ್ರಿ ೮.೩೦ರ ವೇಳೆ ಕುಂಬಳೆಯಲ್ಲಿ ಈತನನ್ನು ಬಂಧಿಸಲಾಗಿದೆ. ಎಸ್ಸಿಪಿಒಗಳಾದ ಕೃಪೇಶ್, ಅಬ್ದುಲ್ ಸಲಾಂ, ಸಿಪಿಒ ಸುಜಿತ್ ಎಂಬಿವರನ್ನು ಸೇರಿಸಿಕೊಂಡು ರಾತ್ರಿ ಹೊತ್ತಿನಲ್ಲಿ ಎಸ್ಐ ವಾಹನ ತಪಾಸಣೆ ನಡೆಸುತ್ತಿದ್ದರು. ಕುಂಬಳೆಗೆ ತಲುಪಿದಾಗ ಕುಂಬಳೆ-ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಪಾಂಬ್ ನೌಮಾನ್ ನಿಂತುಕೊಂಡಿರುವುದು ಪೊಲೀಸರಿಗೆ ಕಂಡುಬಂದಿದೆ. ಪೊಲೀಸರನ್ನು ಕಂಡೊಡನೆ ಆತ ಓಡಿ ಪರಾರಿಯಾಗಲು ಯತ್ನಿಸಿರುವುದು ಪೊಲೀಸರಲ್ಲಿ ಸಂಶಯ ಮೂಡಿಸಿತ್ತು. ಕೂಡಲೇ ಪೊಲೀಸರು ಬೆನ್ನಟ್ಟಿ ಸೆರೆಹಿಡಿದು ಠಾಣೆಗೆ ತಲುಪಿಸಿದಾಗ ಕಳ್ಳಕೋವಿಯ ಕುರಿತಾದ ಸೂಚನೆ ಲಭಿಸಿದೆ. ಮೀಶ ರಫೀಕ್ ಹಾಗೂ ಮಹಮೂದ್ ಎಂಬಿವರನ್ನು ಕೊಲೆಗೈಯ್ಯಲು ಪ್ರಯತ್ನಿಸಿದ ಪ್ರಕರಣಗಳಲ್ಲಿ ನೌಮಾನ್ ಆರೋಪಿಯಾಗಿದ್ದಾನೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಮೀಶ ರಫೀಕ್ನನ್ನು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಮಂಜೇಶ್ವರ ಪೊಲೀಸರು ನೌಮಾನ್ನನ್ನು ಬಂಧಿಸಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಕೂಡಿ ಹಾಕಲಾಗಿತ್ತು. ಆ ಸಮಯದಲ್ಲಿ ಸಹ ಖೈದಿಯಾದ ರಿಯಾದ್ ಯಾನೆ ರಾಕೇಶ್ ರೋಕಿ ಎಂಬಾತನೊಂದಿಗೆ ಗೆಳೆತನವಾಯಿತು. ಆತನ ಸಹಾಯದಿಂದ ನೌಮಾನ್ಗೆ ಕೋವಿ ಲಭಿಸಿದೆಯೆಂದು ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.
