ಹೆಲ್ಮೆಟ್ ಧರಿಸದೆ ಕ್ಯಾಮರಾ ಮುಂದೆ ಸಂಚರಿಸಿದುದು ೧೫೫ ಬಾರಿ: ಬೈಕ್ ಸವಾರನಿಗೆ ಅತೀ ದೊಡ್ಡ ಮೊತ್ತ ದಂಡ
ಕಣ್ಣೂರು: ಹೆಲ್ಮೆಟ್ ಧರಿಸದೆ ಎಐ ಕ್ಯಾಮರಾ ಮುಂದೆ ೧೫೫ ಬಾರಿ ಸಂಚರಿಸಿದ ಬೈಕ್ ಸವಾರನಿಗೆ ಮೋಟಾರ್ ವಾಹನ ಇಲಾಖೆ ೮೬,೫೦೦ ರೂಪಾಯಿ ದಂಡ ಹೇರಿದೆ. ಅಲ್ಲದೆ ಒಂದು ವರ್ಷಕ್ಕೆ ಯುವಕನ ಲೈಸನ್ಸ್ ಅಮಾನತುಗೊಳಿಸಲಾಗಿದೆ. ಪಳಯಂಗಾಡಿ ಮಾಟೂಲ್ ನಿವಾಸಿಯಾದ ಯುವಕನಿಗೆ ಈ ಬಗ್ಗೆ ತಿಳಿಸಿ ನೋಟೀಸ್ ಲಭಿಸಿದ್ದು, ಆವಾಗಲೇ ಆತನಿಗೆ ವಿಷಯ ಅರಿವಿಗೆ ಬಂದಿದೆ. ಇದು ರಾಜ್ಯದಲ್ಲೇ ಕ್ಯಾಮರಾ ಮೂಲಕ ಹೇರಿದ ಅತೀ ದೊಡ್ಡ ದಂಡವಾಗಿದೆ.
ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದುದರ ಹೊರತು ಎಐ ಕ್ಯಾಮರಾ ಮುಂದೆ ನಿಂತು ವಿವಿಧ ಚೇಷ್ಠೆ ಪ್ರದರ್ಶಿಸಿ, ಡ್ರೈವಿಂಗ್ ನಡೆಸಿರುವುದಾಗಿ ಆತನ ವಿರುದ್ಧ ಆರೋಪ ಹೊರಿಸಲಾಗಿದೆ. ಈ ಸಂಬಂಧ ಯುವಕನ ಮೊಬೈಲ್ಗೆ ಹಲವು ಬಾರಿ ಸಂದೇಶ, ಮನೆಗೆ ನೋಟೀಸ್ ಕಳುಹಿಸಿದರೂ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನು ಉಲ್ಲಂಘನೆ ಮುಂದುವರಿದ ಹಿನ್ನೆಲೆಯಲ್ಲಿ ಮೋಟಾರು ವಾಹನ ಇಲಾಖೆ ಅಧಿಕಾರಿ ನೋಟೀಸ್ನೊಂದಿಗೆ ಮನೆಗೆ ತಲುಪಿದ್ದಾರೆ. ಬೈಕ್ ಮಾರಾಟ ಮಾಡಿದರೂ ಕೂಡಾ ಈ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲವೆಂದು ಯುವಕ ಅಧಿಕಾರಿಗಳ ಮುಂದೆ ತನ್ನ ಸಂಕಷ್ಟವನ್ನು ತಿಳಿಸಿರುವುದಾಗಿ ಹೇಳಲಾಗುತ್ತಿದೆ.