ಹೇಳಿಕೆ ದಾಖಲಿಸಿಕೊಳ್ಳಲು ಮಕ್ಕಳು ಮತ್ತು ಮಹಿಳೆಯರನ್ನು ಪೊಲೀಸ್ ಠಾಣೆಗೆ ಕರೆಸಬಾರದು
ಕಾಸರಗೋಡು: ಪ್ರಕರಣಗಳಿಗೆ ಸಂಬಂಧಿಸಿ ಅಥವಾ ದೂರುಗಳಿಗೆ ಸಂಬಂಧಿಸಿ ಹೇಳಿಕೆ ದಾಖಲಿಸಿಕೊಳ್ಳಲು ಮಕ್ಕಳು ಮತ್ತು ಮಹಿಳೆಯರನ್ನು ಪೊಲೀಸ್ ಠಾಣೆ ಕರೆಸಬಾರದೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹೊರಡಿಸಿರುವ ಹೊಸ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಮಕ್ಕಳು ಮತ್ತು ಮಹಿಳೆಯರ ಹೇಳಿಕೆ ದಾಖಲಿಸಬೇಕಾಗಿದ್ದಲ್ಲಿ ಮಹಿಳಾ ಪೊಲೀಸರು ನೇರವಾಗಿ ಅಂತಹ ಮನೆಗಳಿಗೆ ಹೋಗಿ ಅದನ್ನು ದಾಖಲಿಸಬೇಕು. ಮನೆ ಸದಸ್ಯರ ಸಾನ್ನಿಧ್ಯದಲ್ಲೇ ಹೇಳಿಕೆ ದಾಖಲಿಸಬೇಕು. ಹೀಗೆ ದಾಖಲಿಸಲಾಗುವ ಹೇಳಿಕೆಗಳನ್ನು ಬಹಿರಂಗಪಡಿಸದೆ ಅದನ್ನು ಗೌಪ್ಯವಾಗಿರಿಸಬೇಕು. ಮಕ್ಕಳು ಮತ್ತು ೬೫ಕ್ಕಿಂತ ಮೇಲಿನ ವಯೋಮಿತಿಯವರು ಮತ್ತು ದೈಹಿಕ ಅಂಗವಿಕಲತೆ ಹೊಂದಿದವರ ಹೇಳಿಕೆ ದಾಖಲಿಸುವ ಹೆಸರಲ್ಲಿ ಅಂತಹವರನ್ನು ಪೊಲೀಸ್ ಠಾಣೆಗೆ ಕರೆಸಬಾರದು. ಅಂತಹವರ ಮನೆಗಳಿಗೆ ಪೊಲೀಸರು ಸಾಗಿ ಹೇಳಿಕೆ ದಾಖಲಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.