ಹೊಸಂಗಡಿಯಲ್ಲಿ ಜ್ಯುವೆಲ್ಲರಿ ದರೋಡೆಗೈದ ಮತ್ತಿಬ್ಬರು ಆರೋಪಿಗಳ ಬಂಧನ
ಮಂಜೇಶ್ವರ: ಮೂರು ವರ್ಷಗಳ ಹಿಂದೆ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿಯಿಂದ ದರೋಡೆ ನಡೆಸಿದ ಪ್ರಕರಣದಲ್ಲಿ ಇದೀಗ ಮತ್ತಿಬ್ಬರು ಆರೋಪಿಗಳನ್ನು ಮಂಜೇಶ್ವರ ಠಾಣೆಯ ಇನ್ಸ್ಪೆಕ್ಟರ್ ಕೆ. ರಾಜೀವ್ ಕುಮಾರ್ ನೇತೃತ್ವದ ಪೊಲೀಸರು ಸೆರೆ ಹಿಡಿದಿದ್ದಾರೆ. ಕರ್ನಾಟಕದ ಬಂಟ್ವಾಳ ತಾಲೂಕು ಪರಂಗಿಪೇಟೆ ಪುದು ಗ್ರಾಮ ಪಂಜಾಮೆ ಹೌಸ್ನ ನಿವಾಸಿಗಳಾದ ಮುಹಮ್ಮದ್ ಇಸ್ಮಾಯಿಲ್ (52) ಹಾಗೂ ಮುಹ ಮ್ಮದ್ ಗೋಸ್ (41) ಎಂಬಿವರು ಬಂಧಿತರಾದ ಆರೋಪಿಗಳಾಗಿದ್ದಾರೆ.
2021 ಜುಲೈ 26ರಂದು ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿಗೆ ತಲುಪಿದ ಏಳು ಮಂದಿಯ ತಂಡ ಸೆಕ್ಯುರಿಟಿ ನೌಕರನನ್ನು ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಹಲ್ಲೆಗೈದು ಅಸ್ವಸ್ಥಗೊಳಿಸಿದ ಬಳಿಕ ಜ್ಯುವೆಲ್ಲರಿಯ ಹಿಂಭಾಗದಲ್ಲಿ ಕಟ್ಟಿ ಹಾಕಿದ ಬಳಿಕ ದರೋಡೆ ನಡೆಸಿತ್ತು. ಗ್ಯಾಸ್ ಕಟ್ಟರ್ ಬಳಸಿ ಜ್ಯುವೆಲ್ಲರಿಯ ಬೀಗ ಮುರಿದ ಆರೋಪಿಗಳು 9 ಲಕ್ಷ ರೂಪಾಯಿ ಮೌಲ್ಯದ 14.8 ಕೋಟಿ ಬೆಳ್ಳಿ ಆಭರಣಗಳು, ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ವಾಚ್, ನಾಲ್ಕೂವರೆ ಲಕ್ಷ ರೂ. ಸಹಿತ ಒಟ್ಟು 16 ಲಕ್ಷ ರೂಪಾಯಿಗಳ ಸೊತ್ತುಗಳನ್ನು ತಂಡ ದೋಚಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈ ಹಿಂದೆ ಮೂರು ಮಂದಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಇನ್ನುಳಿದ ಆರೋಪಿಗಳಿ ಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.