ಮಂಜೇಶ್ವರ: ಉಪ್ಪಳದಲ್ಲಿ ನಿನ್ನೆ ರಾತ್ರಿ ಎರಡು ಗೂಂಡಾ ತಂಡಗಳ ಮಧ್ಯೆ ಪರಸ್ಪರ ಗುಂಡು ಹಾರಾಟ ನಡೆದಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಎರಡು ವಾಹನಗಳು ಹಾನಿಗೀಡಾಗಿವೆ. ನಿನ್ನೆ ರಾತ್ರಿ ೧೦.೩೦ರ ವೇಳೆ ಉಪ್ಪಳದ ಕೈಕಂಬ ರಸ್ತೆಯಲ್ಲಿ ಘಟನೆ ನಡೆದಿದೆ. ಎರಡು ವಾಹನಗಳಲ್ಲಿ ತಲುಪಿದ ಕಾಲಿಯಾ ರಫೀಕ್ ಹಾಗೂ ಕಸಾಯಿ ಅಲಿ ನೇತೃತ್ವದ ತಂಡಗಳ ಮಧ್ಯೆ ಈ ಗುಂಡು ಹಾರಾಟ ನಡೆದಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆಯೆಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ರಾತ್ರಿ ಗುಂಡು ಹಾರಾಟದ ಸದ್ದು ಕೇಳಿ ಬಂದಿತ್ತು. ಈ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿದ್ದು ಅಷ್ಟರಲ್ಲಿ ಎರಡೂ ವಾಹನಗಳನ್ನು ಉಪೇಕ್ಷಿಸಿ ತಂಡಗಳು ಪರಾರಿಯಾಗಿವೆ. ತಂಡದಲ್ಲಿ ಎಷ್ಟು ಮಂದಿಯಿದ್ದರೆಂದು ತಿಳಿದು ಬಂದಿಲ್ಲ. ಸ್ಥಳದಲ್ಲಿ ಒಂದು ವ್ಯಾಗನರ್ ಕಾರು ಹಾಗೂ ಇನ್ನೊಂದು ಬೊಲೇರೊ ಉಪೇಕ್ಷಿಸಲ್ಪಟ್ಟ ಸ್ಥಿತಿಯಲ್ಲಿದ್ದು ಅವುಗಳನ್ನು ಪೊಲೀಸರು ಕಸ್ಟಡಿಗೆ ತೆಗೆದು ಮಂಜೇಶ್ವರ ಠಾಣೆಗೆ ತಲುಪಿಸಿದ್ದಾರೆ. ಬಳಿಕ ನಡೆದ ಪರಿಶೋಧನೆಯಲ್ಲಿ ವ್ಯಾಗನರ್ ಕಾರು ಬಪ್ಪಾಯಿತೊಟ್ಟಿ ನಿವಾಸಿ ಕಾಲಿಯಾ ರಫೀಕ್‌ನದ್ದು ಹಾಗೂ ಬೊಲೇರೊ ಉಪ್ಪಳ ಹಿದಾಯತ್ ನಗರ ನಿವಾಸಿ ಕಸಾಯಿ ಅಲಿಯದ್ದೆಂದು ತಿಳಿದು ಬಂದಿದೆ. ವ್ಯಾಗನರ್ ಕಾರಿನ ಮುಂಭಾಗ ಗುಂಡು ತಗಲಿದೆ. ಬೊಲೇರೊದ ಬೋನೆಟ್‌ಗೆ ತಾಗಿದ ಗುಂಡು ಗಾಜಿಗೆ ತಗಲಿ ಗಾಜು ಹಾನಿಗೊಂಡಿದೆ. ಪರಸ್ಪರ ಗುಂಡು ಹಾರಿಸಿದಾಗ ವಾಹನಗಳು ಹಾನಿಗೊಂಡಿದೆಯೆಂದು ತನಿಖೆಯಲ್ಲಿ ತಿಳಿದು ಬಂದಿದೆ.