ಕಾಡಾನೆಗಳ ಹಾವಳಿ: ಕೊರತ್ತಿಮೂಲೆಯಲ್ಲಿ ಎರಡು ಕೃಷಿ ತೋಟ ಧ್ವಂಸ

0
42

ಅಡೂರು: ಅಡೂರು ಮತ್ತು ಪರಿಸರ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಬೆಂಬಿಡದೆ  ಕಾಡತೊಡಗಿದೆ.

ಇಲ್ಲಿನ ಕೊರತ್ತಿಮೂಲೆಯ ಜಾನಕಿ ಮತ್ತು ಅಪ್ಪಣ್ಣ ನಾಯ್ಕ ಎಂಬವರ ತೋಟಕ್ಕೆ ಮೊನ್ನೆ ಎರಡು ಕಾಡಾನೆಗಳು ನುಗ್ಗಿ ಬಾಳೆ ಇತ್ಯಾದಿ ಸಸಿಗಳನ್ನು ತಿಂದು ತೇಗಿ ಧ್ವಂಸಗೊಳಿಸಿವೆ. ಅಡಿಕೆ, ಬಾಳೆಕೃಷಿ ಇತ್ಯಾದಿಗಳನ್ನು ಪೂರ್ಣವಾಗಿ ನಾಶಗೊಳಿಸಿದ ಸ್ಥಿತಿಯಲ್ಲಿದೆ. ವಿಷಯ ತಿಳಿದ ಅರಣ್ಯಪಾಲಕರು ನಿನ್ನೆ ಸಂಜೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಈ ಎರಡು ತೋಟಗಳ ಮಾಲಕರಿಗೆ ಭಾರೀ ನಷ್ಟ ಉಂಟಾಗಿದೆ.

ಇಲ್ಲಿಗೆ ಕಾಡಾನೆಗಳು ನುಗ್ಗಿ ಕೃಷಿನಾಶಗೊಳಿಸುವುದು ಇದು ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಪರಿಸರ ಪ್ರದೇಶಗಳಿಗೂ ಹಿಂಡಾಗಿ ನುಗ್ಗಿ ಕೃಷಿ ಧ್ವಂಸ ನಡೆಸಿತ್ತು. ಆ ಬಗ್ಗೆ ಜನರು ಅರಣ್ಯ ಇಲಾಖೆಗೆ ಅದೆಷ್ಟೋ ಬಾರಿ ದೂರು ನೀಡಿದರೂ ಕಾಡಾನೆಗಳ ಹಾವಳಿ ತಡೆಗಟ್ಟಲು ಸಮರ್ಪಕ ಕ್ರಮ ಅರಣ್ಯ ಇಲಾಖೆಯ ವತಿಯಿಂದ ಉಂಟಾಗಿಲ್ಲವೆಂದು ಊರವರು ಹೇಳುತ್ತಿದ್ದಾರೆ.

ಕಾಡು ಪ್ರದೇಶಗಳಿಂದ ಆನೆಗಳು ಜನವಾಸ ಕೇಂದ್ರಗಳು ಮತ್ತು ತೋಟಗಳಿಗೆ ನುಗ್ಗಿ ಧ್ವಂಸಗೊಳಿಸು ತ್ತಿರುವುದು ಕೃಷಿ ತೋಟಗಳಿಗೆ ಮಾತ್ರವಲ್ಲ ಜನರ ಪ್ರಾಣಕ್ಕೂ ಬೆದರಿಕೆ ಒಡ್ಡತೊಡಗಿದೆ. ರಾತ್ರಿ ವೇಳೆಗಳಲ್ಲೇ ಕಾಡಾನೆಗಳ ಕಾಟ ಅತೀ ಹೆಚ್ಚಾಗಿ ನಡೆಯುತ್ತಿದೆ. ಸಮೀಪದ ಕರ್ನಾಟಕ ರಾಜ್ಯದ ಅರಣ್ಯಗಳಿಂದಲೇ ಕಾಡಾನೆಗಳು ಹಿಂಡುಹಿಂಡಾಗಿ ಕೃಷಿತೋಟಗಳು ಮತ್ತು ಜನವಾಸ ಕೇಂದ್ರಗಳಿಗೆ ನುಗ್ಗಿ ಉಪಟಳ ನೀಡುತ್ತಿದೆ.

ಇವುಗಳ ಉಪಟಳದಿಂದ ಕೃಷಿ ಬೆಳೆ ನಾಶಗೊಂಡ ಕೃಷಿಕರಿಗೆ  ನಷ್ಟ ಪರಿಹಾರವೂ ಲಭಿಸುತ್ತಿಲ್ಲ. ಇದು ಕೃಷಿಯನ್ನೇ   ಪ್ರಧಾನ ಜೀವ ನೋಪಾಯ ಮಾರ್ಗವಾಗಿ ನಂಬಿ ಜೀವಿಸುತ್ತಿರುವ ಈ ಪ್ರದೇಶದ ಕೃಷಿಕರ ಆರ್ಥಿಕ ಬೆನ್ನೆಲುಬನ್ನೇ ಮುರಿಯುವಂತೆ ಮಾಡಿದೆ.

NO COMMENTS

LEAVE A REPLY