ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸಿದ ಹೈದರಾಬಾದ್ ಪೊಲೀಸರು
ಹೈದರಾಬಾದ್: ಚುನಾವಣಾ ಪ್ರಚಾರದಲ್ಲಿ ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡ ದೂರಿನ ಮೇಲೆ ಕೇಂದ್ರ ಗೃಹಖಾತೆ ಸಚಿವ ಅಮಿತ್ ಶಾ, ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಮಾಧವಿಲತಾ ಮತ್ತು ಇತರ ಹಲವು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಉಪಧ್ಯಕ್ಷ ನಿರಂಜನ ರೆಡ್ಡಿಯವರು ತೆಲಂಗಾಣ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದು, ಅದರಲ್ಲಿ ಮೇ ೧ರಂದು ಲಾಲ್ಡವಾಜಾದಿಂದ ಸುಧಾ ಟಾಕೀಸ್ ತನಕ ಬಿಜೆಪಿ ನಡೆಸಿದ ರ‍್ಯಾಲಿಯಲ್ಲಿ ಕೆಲವು ಅಪ್ರಾಪ್ತ ಮಕ್ಕಳನ್ನು ಅಮಿತ್ ಶಾರೊಂದಿಗೆ ವೇದಿಕೆಯಲ್ಲ್ಲಿದ್ದರೆಂದು ಆರೋಪಿಸಿದ್ದಾರೆ. ಇದರಲ್ಲಿ ಮಗುವೊಂದು ಬಿಜೆಪಿ ಚಿಹ್ನೆಯೊಂದಿಗೆ ಕಾಣಿಸಿಕೊಂಡಿದೆ. ಇದು ಚುನಾವಣಾ ಆಯೋಗದ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆಯಾಗಿದೆಯೆಂದು ದೂರಿನಲ್ಲಿ ನಿರಂಜನ ರೆಡ್ಡಿ ಆರೋಪಿಸಿದ್ದಾರೆ. ಆ ದೂರನ್ನು ಆಯೋಗ ನಂತರ ಪೊಲೀಸರಿಗೆ ರವಾನಿಸಿತು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ ೧೮೮ರ ಅಡಿ ಈ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ನೇತಾರರಾದ ಜಿ. ಕಿಶನ್ ರೆಡ್ಡಿ, ಯಮನ್ ಸಿಂಗ್ ಮತ್ತು ಶಾಸಕ ರಾಜಾಸಿಂಗ್‌ರನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.