ಬಿಜೆಪಿಯಲ್ಲಿ ವಿಲೀನಗೊಂಡ ಕೇರಳ ಜನಪಕ್ಷ ಸೆಕ್ಯುಲರ್: ಪಿ.ಸಿ. ಜೋರ್ಜ್ ಸಹಿತ ಹಲವರು ಸದಸ್ಯತನ ಸ್ವೀಕಾರ
ಹೊಸದಿಲ್ಲಿ: ಮಾಜಿ ಶಾಸಕ ಪಿ.ಸಿ. ಜೋರ್ಜ್ರ ನೇತೃತ್ವದ ಕೇರಳ ಜನಪಕ್ಷಂ ಸೆಕ್ಯುಲರ್ ಪಕ್ಷ ದಿಲ್ಲಿಯಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಬಿಜೆಪಿಯೊಂದಿಗೆ ವಿದ್ಯುಕ್ತವಾಗಿ ವಿಲೀನಗೊಂಡಿದೆ. ಮಾತ್ರವಲ್ಲ ಪಿ.ಸಿ. ಜೋರ್ಜ್ ಮತ್ತು ಅವರ ಪುತ್ರ ಕೋಟಯಂ ಜಿಲ್ಲಾ ಪಂಚಾಯತ್ ಸದಸ್ಯರೂ ಆಗಿರುವ ನ್ಯಾಯವಾದಿ ಶೋನ್ ಜೋರ್ಜ್, ಕೇರಳ ಜನಪಕ್ಷ ಸೆಕ್ಯುಲರ್ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಜೋರ್ಜ್ ಜೋಸೆಫ್ ಕಾಕಾನಾಡ್ ಸೇರಿದಂತೆ ಹಲವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರಿಂದ ಬಿಜೆಪಿಯ ಸದಸ್ಯತನ ತಡೆದು ಬಿಜೆಪಿಗೆ ವಿದ್ಯುಕ್ತವಾಗಿ ಸೇರ್ಪಡೆಗೊಂಡಿದ್ದಾರೆ.
ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದಲ್ಲಿ ಪಿ.ವಿ. ಜೋರ್ಜ್ರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಪಿ.ಸಿ. ಜೋರ್ಜ್ ಇತ್ತೀಚೆಗಿನಿಂದ ಬಿಜೆಪಿ ಅನುಕೂಲಕರ ನಿಲುವನ್ನೇ ತಾಳುತ್ತಾ ಬಂದಿದ್ದರು. ಅವರು ತಮ್ಮ ಪಕ್ಷವನ್ನೇ ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಳ್ಳುವ ತೀರ್ಮಾನ ಸರಿಯೇ ಎಂಬುದನ್ನು ಪರಿಶೀಲಿಸಲು ಜನಪಕ್ಷಂ ಪಂಚ ಸದಸ್ಯರ ಸಮಿತಿಗೆ ರೂಪು ನೀಡಿತ್ತು. ಅದರಂತೆ ಆ ಸಮಿತಿ ನಡೆಸಿದ ಪರಿಶೀಲನಾ ವರದಿಯಲ್ಲಿ ಬಿಜೆಪಿಯೊಂದಿಗೆ ಸೇರುವುದು ಸರಿಯೆಂಬ ನಿಲುವನ್ನು ಸ್ಪಷ್ಟಪಡಿಸಲಾಗಿತ್ತು. ಅದನ್ನು ಪಿ.ಸಿ. ಜೋರ್ಜ್ ಬಳಿಕ ಬಿಜೆಪಿ ನೇತೃತ್ವಕ್ಕೆ ತಿಳಿಸಿದ್ದರು.
೧೯೮೦, ೧೯೮೨, ೧೯೯೬ ಮತ್ತು ೨೦೧೬ರಲ್ಲಿ ಪಿ.ಸಿ. ಜೋರ್ಜ್ ಅವರು ಕೋಟಯಂ ಜಿಲ್ಲೆಯ ಪೂಂಜಾರ್ ವಿಧಾನಸಭಾ ಕ್ಷೇತ್ರದಲ್ಲಿ ಕೇರಳ ಕಾಂಗ್ರೆಸ್ ಪ್ರತಿನಿಧಿಯಾಗಿ ಗೆದ್ದು ಶಾಸಕರಾಗಿ ಆಯ್ಕೆಗೊಂಡಿದ್ದರು. ಅವರು ಈ ಹಿಂದೆ ಕೇರಳ ಕಾಂಗ್ರೆಸ್ (ಎಂ) ಕೇರಳ ಕಾಂಗ್ರೆಸ್ (ಜೆ)ಯಲ್ಲೂ ಕಾರ್ಯವೆಸಗಿದ್ದರು. ಬಳಿಕ ಕೇರಳ ಕಾಂಗ್ರೆಸ್ ಸೆಕ್ಯುಲರ್ ಎಂಬ ಹೆಸರಲ್ಲಿ ಸ್ವಂತ ಪಕ್ಷ ಕಟ್ಟಿಕೊಂಡರು. ಆ ಬಳಿಕ ಅವರು ಆ ಪಕ್ಷವನ್ನು ಬಿಟ್ಟು ೨೦೧೭ರಲ್ಲಿ ಕೇರಳ ಜನಪಕ್ಷಂ ಸೆಕ್ಯೂಲರ್ ಪಾರ್ಟಿಗೆ ರೂಪು ನೀಡಿದ್ದರು. ೨೦೨೧ರಲ್ಲಿ ಅವರು ವಿಭಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು.