ಪೋಕ್ಸೋ ಪ್ರಕರಣದ ಆರೋಪಿಗೆ 7 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಶ್ ಪಿ.ಎಂ. ಅವರು ಏಳು ವರ್ಷ ಕಠಿಣ ಸಜೆ ಹಾಗೂ 25000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಚೀಮೇನಿಗೆ ಸಮೀಪದ ಮಾಣಿಯೋಟ್ ಸೌತ್ ನಿವಾಸಿ ಪ್ರತೀಷ್ ಎ.ವಿ. (44) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

2022 ಡಿಸೆಂಬರ್ ಮತ್ತು 2023 ಜನವರಿ ತಿಂಗಳ ಯಾವುದೋ ಒಂದು ದಿನದಂದು ಚೀಮೇನಿ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ  ಪ್ರದೇಶದ  ಮನೆಯೊಂದರಲ್ಲಿ ಏಕಾಂಗಿಯಾಗಿ ಕುಳಿತು ಟಿವಿ ವೀಕ್ಷಿಸುತ್ತಿದ್ದ 12ರ ಹರೆಯದ ಬಾಲಕಿಗೆ  ಆ ಮನೆಗೆ ಅಕ್ರಮವಾಗಿ ನುಗ್ಗಿ  ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಚೀಮೇನಿ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ನ್ಯಾಯಾಲಯ ಆತನಿಗೆ ಈ ಶಿಕ್ಷೆ ವಿಧಿಸಿದೆ. ಎಸ್.ಐ ಅಜಿತ ಕೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೊಸದುರ್ಗ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಗಂಗಾಧರನ್ ಎ. ನ್ಯಾಯಾಲಯದಲ್ಲಿ ವಾದಿಸಿದ್ದರು.

You cannot copy contents of this page