ಮಂಜೇಶ್ವರದ ಮೀನು ಕಾರ್ಮಿಕ ನಾಪತ್ತೆಯಾಗಿ ೩ ತಿಂಗಳು ಕಳೆದರೂ ಮಾಹಿತಿ ಅಲಭ್ಯ: ಕುಟುಂಬ ಆತಂಕದಲ್ಲಿ
ಮಂಜೇಶ್ವರ: ಮೀನು ಕಾರ್ಮಿಕನಾದ ಯುವಕನೋರ್ವ ನಿಗೂಢ ನಾಪತ್ತೆಯಾಗಿ ನಾಲ್ಕು ತಿಂಗಳಾಗುತ್ತಾ ಬಂದರೂ ಅವರು ಪತ್ತೆಯಾಗದಿರುವುದು ಕುಟುಂಬ ಹಾಗೂ ಸ್ನೇಹಿತರಲ್ಲಿ ಆತಂಕ ಮೂಡಿಸಿದೆ.
ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಯ ನಿವಾಸಿ ರೋಷನ್ ಮೊಂತೆರೋ (೪೨) ಎಂಬವರು ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಇವರು ನವಂಬರ್ ೧೮ರಂದು ರಾತ್ರಿಯಿಂದ ನಾಪತ್ತೆಯಾಗಿದ್ದಾರೆ. ಅಂದು ರಾತ್ರಿ ಸುಮಾರು ೧೧.೪೫ರವರೆಗೆ ಮನೆಯಲ್ಲಿದ್ದ ರೋಷನ್ ಮೊಂತೆರೋ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ನಾಪತ್ತೆ ಬಗ್ಗೆ ಪತ್ನಿ ರೇಖಾ ಮೊಂತೆರೋ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ವಿವಿಧೆಡೆ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ. ಮನೆಯವರು, ಸ್ನೇಹಿತರು ಕೂಡಾ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ರೋಷನ್ ಮೊಂತೆರೋ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆರಂಭದಲ್ಲಿ ಸಂಬಂಧಿಕರು, ಸ್ನೇಹಿತರು, ಊರವರು ಹಾಗೂ ಕರಾವಳಿ ಪೊಲೀಸರು ತಲಪ್ಪಾಡಿ ಹಾಗೂ ಮಂಜೇಶ್ವರ ಪರಿಸರದ ವಿವಿಧೆಡೆಗಳಲ್ಲಿ ಹುಡುಕಾಡಿದ್ದಾರೆ. ಅನಂತರ ಮಂಜೇಶ್ವರ ಪೊಲೀಸರು ಹಾಗೂ ಶ್ವಾನದಳವೂ ವಿವಿಧೆಡೆ ಹುಡುಕಾಡಿದರೂ ಯಾವುದೇ ಮಾಹಿತಿ ಲಭಿಸಿಲ್ಲ. ಮನೆ ಬಳಿಯ ಕಟ್ಟಡದಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು ಆದರೆ ಅದರಲ್ಲಿ ಯಾವುದೇ ದೃಶ್ಯ ಪತ್ತೆಯಾಗಿಲ್ಲ. ಆದರೆ ರೋಷನ್ ಮೊಂತೆರೋ ದಿಢೀರ್ ನಾಪತ್ತೆಯಾಗಲು ಕಾರಣವೇನು, ಅವರು ಎಲ್ಲಿಗೆ ಹೋಗಿರಬಹುದು ಎಂದು ತಿಳಿಯದೆ ಕುಟುಂಬ ಆತಂಕದಲ್ಲಿದೆ. ರೋಷನ್ ಮೊಂತೆರೋ ನಾಪತ್ತೆ ಬಗ್ಗೆ ಮಂಜೇಶ್ವರ ಪೊಲೀಸರು ಕರ್ನಾಟಕ ಸಹಿತ ವಿವಿಧ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲಿಂದಲೂ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ರೋಷನ್ ಮೊಂತೆರೋ ನಾಪತ್ತೆಯಾಗುವ ಸಂದರ್ಭದಲ್ಲಿ ಅವರ ವಾಚ್, ಪರ್ಸ್, ಮೊಬೈಲ್ ಫೋನ್, ಉಂಗುರ ಮೊದಲಾದವುಗಳನ್ನು ಮನೆಯಲ್ಲಿರಿಸಿದ್ದರು. ಮೊಬೈಲ್ ಫೋನ್ ಪೊಲೀಸರು ಪಡೆದು ಪರಿಶೀಲನೆ ನಡೆಸಿದರೂ ಅದರಲ್ಲಿ ನಾಪತ್ತೆಗೆ ಕಾರಣವಾದ ಯಾವುದೇ ಸುಳಿವು ಲಭಿಸಿಲ್ಲ. ರೋಷನ್ ಪತ್ತೆಯಾಗದಿರುವುದರಿಂದ ಅವರ ಪತ್ನಿ, ಇಬ್ಬರು ಮಕ್ಕಳು, ತಾಯಿ, ಸಂಬಂಧಿಕರು ತೀವ್ರ ಆತಂಕದಲ್ಲಿದ್ದಾರೆ. ಇದುವರೆಗೆ ವಿವಿಧ ಕಡೆಗಳಲ್ಲಿ ಶೋಧ ನಡೆಸಿದರೂ ಪತ್ತೆಯಾಗದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ರೋಷನ್ ಮೊಂತೆರೋರನ್ನು ಶೀಘ್ರ ಪತ್ತೆಹಚ್ಚಬೇಕೆಂದು ಇವರು ಪೊಲೀಸ ಅಧಿಕಾರಿಗಳಲ್ಲಿ ವಿನಂತಿಸುತ್ತಿದ್ದಾರೆ.