ಮುಳ್ಳೇರಿಯ: ಸಹಕಾರಿ ಸಂಘದಿಂದ ಹಣ ಲಪಟಾಯಿಸಿದ ಪ್ರಕರಣ: ತನಿಖೆ ಜಿಲ್ಲಾ ಕ್ರೈಂಬ್ರಾಂಚ್‌ಗೆ ಹಸ್ತಾಂತರ; ಆರೋಪಿ ರತೀಶ್ ಗೋವಾಕ್ಕೆ ಪರಾರಿ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯದರ್ಶಿ ನಡೆಸಿದ ಹಣಕಾಸು ವಂಚನೆ ಪ್ರಕರಣವನ್ನು ಕಾಸರಗೋಡು ಜಿಲ್ಲಾ ಕ್ರೈಂಬ್ರಾಂಚ್ ತನಿಖೆ ನಡೆಸಲಿದೆ. ಕ್ರೈಂಬ್ರಾಂಚ್ ಡಿವೈಎಸ್‌ಪಿ ಶಿಬು ಪಾಪಚ್ಚನ್‌ರ ನೇತೃತ್ವದಲ್ಲಿ ತಂಡಕ್ಕೆ ತನಿಖೆಯ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ಸೊಸೈಟಿಯ ಕಾರ್ಯದರ್ಶಿಯೂ ಸಿಪಿಎಂ ಮುಳ್ಳೇರಿಯ ಲೋಕಲ್  ಕಮಿಟಿ ಸದಸ್ಯನಾದ ಕೆ. ರತೀಶ್ ಸದಸ್ಯರಿಗೆ ತಿಳಿಯದೆ ೪.೭೬ ಕೋಟಿ ರೂಪಾಯಿಗಳ ಸಾಲ ತೆಗೆದು ಲಪಟಾಯಿಸಿರುವುದಾಗಿ ದೂರಲಾಗಿದೆ. ಇದರಂತೆ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ರತೀಶ್ ಕರ್ನಾಟಕಕ್ಕೆ ಪರಾರಿಯಾಗಿ ದ್ದರು. ಅಲ್ಲಿಂದ ಹಾಸನಕ್ಕೆ ತೆರಳಿದ ಇವರು ಗೋವಾಕ್ಕೆ ತಲುಪಿರುವುದಾಗಿ ಸೂಚನೆಯಿದೆ. ಬೆಂಗಳೂರು ಸೈಬರ್ ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ರತೀಶ್ ಕರ್ನಾಟಕದಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ರತೀಶ್‌ನ ಪತ್ತೆಗಾಗಿ ಆದೂರು ಪೊಲೀಸರು ಪ್ರಸ್ತುತ ಕರ್ನಾಟಕ ಸಹಿತ ವಿವಿಧೆಡೆ ಶೋಧ ನಡೆಸುತ್ತಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಹಕಾರಿ ಸಂಘದಿಂದ ೪.೭೬ ಕೋಟಿ ರೂಪಾಯಿಗಳನ್ನು ರತೀಶ್ ಲಪಟಾಯಿಸಿರುವುದಾಗಿ ಕೇಸು ದಾಖಲಿಸಲಾಗಿದೆ. ಇದೇ ವೇಳೆ ಈ ಪ್ರಕರಣದಲ್ಲಿ ಬೇರೆ ಯಾರಾದರೂ  ಶಾಮೀಲಾಗಿದ್ದಾರೆಯೇ ಎಂದು ತಿಳಿಯಬೇಕಾದರೆ ಮೊದಲು ರತೀಶ್‌ನನ್ನು ಪತ್ತೆಹಚ್ಚಿ ತನಿಖೆಗೊಳಪಡಿಸಬೇಕಾಗಿದೆ. ಕಾರಡ್ಕದ ಓರ್ವ ನೇತಾರನೊಂದಿಗೆ ರತೀಶ್‌ಗೆ ಹತ್ತಿರದ ಸಂಬಂಧವಿದೆ ಎನ್ನಲಾಗುತ್ತಿದೆ. ಆ ನೇತಾರನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ಹಾಗೂ ವಯನಾಡ್‌ನಲ್ಲಿ ರತೀಶ್ ಸ್ಥಳ ಖರೀದಿಸಿರುವುದಾಗಿಯೂ ಮಾಹಿತಿ ಲಭಿಸಿದೆ. ಇದೇ ವೇಳೆ ಸಹಕಾರಿ ಸಂಘದ ಕಾರ್ಯದರ್ಶಿ ನಡೆಸಿದ ಹಣ ವಂಚನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯವಾಗಿಯೂ ಚರ್ಚೆಗೆ ಕಾರಣವಾಗಿದೆ. ನೇತಾರರ ಅರಿವಿನೊಂದಿಗೆ ಈ ವಂಚನೆ ನಡೆದಿದೆಯೆಂದು ಆರೋಪಿಸಿ ಯುಡಿಎಫ್ ರಂಗಕ್ಕಿಳಿದಿದೆ.

RELATED NEWS

You cannot copy contents of this page