ಸಮುದ್ರದಲ್ಲಿ ಬೋಟ್ ಅಪಘಾತ: ಓರ್ವ ಮೃತ್ಯು; ನಾಪತ್ತೆಯಾದ ವ್ಯಕ್ತಿಗಾಗಿ ಶೋಧ
ಕಾಸರಗೋಡು: ಮೀನುಗಾರಿಕೆ ಗೆಂದು ಸಮುದ್ರಕ್ಕೆ ತೆರಳಿದ ಫೈಬರ್ ಬೋಟ್ ಬಲವಾದ ತೆರೆಗೆ ಸಿಲುಕಿ ಮಗುಚಿ ಬಿದ್ದು ಓರ್ವ ಸಾವ ನ್ನಪ್ಪಿ, ಇನ್ನೋರ್ವ ನಾಪತ್ತೆಯಾದ ಘಟನೆ ನೀಲೇಶ್ವರ ಅಳಿತ್ತಲದಲ್ಲಿ ನಡೆದಿದೆ. ಬೋಟಿನಲ್ಲಿದ್ದ ೩೫ರಷ್ಟು ಮಂದಿ ಬೆಸ್ತರು ಸಂಭಾವ್ಯ ಅನಾಹುತದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ‘ಇಂಡಿಯನ್’ ಎಂಬ ಹೆಸರಿನ ಬೋಟ್ ದುರಂತಕ್ಕೀಡಾಗಿದೆ. ಮಲಪ್ಪುರಂ ಪರಪ್ಪನಂಗಾಡಿ ಅರಿಯಲ್ಲೂರು ಕೊಂಙಂಡೆ ಚಿರುಪುರೈಕ್ಕಲ್ ಅಬೂಬಕ್ಕರ್ (ಕೋಯಾಮೋನ್- 62) ಎಂಬವರು ಸಾವನ್ನಪ್ಪಿದ ದುರ್ದೈವಿ. ಪರಪ್ಪನಂಗಾಡಿ ನಿವಾಸಿ ಐ.ವಿ.ಮುಜೀಬ್ ಎಂಬವರು ನಾಪತ್ತೆಯಾಗಿದ್ದು, ಅವರಿಗಗಿ ಕರಾವಳಿ, ಲೋಕಲ್ ಪೊಲೀಸರು, ಮೀನುಗಾರಿಕಾ ಇಲಾಖೆಯ ತಂಡ ಹಾಗೂ ಬೆಸ್ತರು ಶೋಧ ನಡೆಸುತ್ತಿದ್ದಾರೆ. ಈ ದುರಂತದಿಂದ ಪಾರಾದ ಇತರ ಬೆಸ್ತರನ್ನು ಹೊಸದುರ್ಗ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಫೈಬರ್ ಬೋಟ್‌ನಲ್ಲಿ ತಮಿಳುನಾಡಿನ ಹನ್ನೆರಡು ಮಂದಿ, ಒಡಿಸ್ಸಾದ ೧೫ ಮಂದಿ ಮತ್ತು ಪರಪ್ಪನಂಗಾಡಿಯ ೧೦ ಮಂದಿ ಇದ್ದರು. ಅವರನ್ನೆಲ್ಲಾ ಭದ್ರತಾ ಪಡೆ ಮತ್ತು ಬೆಸ್ತರು ದಡ ಸೇರಿಸಿ ಪ್ರಾಣ ರಕ್ಷಿಸಿದ್ದಾರೆ.
ಸಮುದ್ರ ಮೀನುಗಾರಿಕೆ ವೇಳೆ ಪ್ರಕ್ಷ್ಯುಬ್ದಗೊಂಡಿರುವುದೇ ಬೋಟ್ ಮಗುಚಲು ಕಾರಣವೆನ್ನಲಾಗಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದ ಅಬೂಬಕ್ಕರ್ ಕೋಯಾರ ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗುವುದು. ಮೃತರು ಪತ್ನಿ ಖದೀಜಾ, ಮಕ್ಕಳಾದ ಶಂಶಿಯ, ಸುಹಾನ, ಜಿಹಾನ, ಮೊಹಮ್ಮದ್ ಬಿನ್ ಶಾ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ದುರಂತ ನಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ ಇಂಭಶೇಖರ್, ಡಿಐಜಿ ರಾಜಾಪಾಲ್ ಮೀನ, ಶಾಸಕ ಎಂ. ರಾಜಗೋಪಾಲ್, ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪಾ, ಸಬ್ ಕಲೆಕ್ಟರ್ ಪ್ರತೀಕ್ ಜೈನ್ ಸೇರಿದಂತೆ ಹಲವರು ಆಗಮಿಸಿ ಪರಿಶೀಲನೆ ನಡೆಸಿದರು.