ಅವಿಶ್ವಾಸ ಗೊತ್ತುವಳಿ : ಸಂಸತ್‌ನಲ್ಲಿ ಪ್ರಧಾನಿ ಉತ್ತರ ಇಂದು
ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸರಕಾರವನ್ನು ಮೂಲೆಗುಂಪು ಮಾಡುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಸಂಸತ್‌ನಲ್ಲಿ ಇಂದು ಉತ್ತರ ನೀಡಲಿದ್ದಾರೆ. ಮಣಿಪುರದಲ್ಲಿ ಕೇಂದ್ರ ಸರಕಾರ ದೊಡ್ಡ ವಿಭಜನೆಯನ್ನು ಸೃಷ್ಟಿಸುತ್ತಿದೆಯೆಂದು ವಿರೋಧಪಕ್ಷಗಳು ಕಳೆದ ಎರಡು ದಿನಗಳಿಂದ ಸಂಸತ್‌ನಲ್ಲಿ ಸರಕಾರದ ವಿರುದ್ಧ ರಂಗಕ್ಕಿಳಿದಿದೆ. ಅದಕ್ಕೆ ಪ್ರತಿಯಾಗಿ ಸಚಿವ ಅಮಿತ್ ಷಾ ಸೇರಿದಂತೆ ಸರಕಾರವು ತನ್ನ ಕಾರ್ಯಗಳನ್ನು ಸಮರ್ಥಿಸಿಕೊಂಡಿದೆ. ಸರಕಾರ ಪ್ರಾಥಮಿಕವಾಗಿ ತನ್ನ ಕಲ್ಯಾಣ ಕಾರ್ಯಗಳ ಮೇಲೆ ಗಮನಹರಿಸಿದೆ.
ನಿನ್ನೆ ಸಂಸತ್‌ನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಇನ್ನೂ ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ, ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸುತ್ತಿಲ್ಲ. ಮಣಿಪುರದಲ್ಲಿ ಕೇಂದ್ರ ಸರಕಾರ ಭಾರತ ಮಾತೆಯನ್ನು ಹತ್ಯೆಗೈದಿದೆ ಎಂದು ಆರೋಪಿಸಿದ್ದರು. ಇದಕ್ಕೆಲ್ಲ ಪ್ರಧಾನಮಂತ್ರಿ ನರೇಂದ್ರಮೋದಿ ಸಂಸತ್‌ನಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ.