ಆರ್‌ಎಸ್‌ಎಸ್ ರಾಷ್ಟ್ರೀಯ ನೇತಾರರೊಂದಿಗೆ ಎಡಿಜಿಪಿ ಸಮಾಲೋಚನೆ: ಸಂದರ್ಶನದ ಹೆಸರಲ್ಲಿ ರಾಜ್ಯದಲ್ಲಿ ಕಾವೇರಿದ ರಾಜಕೀಯ ವಾಕ್ಸಮರ
ತಿರುವನಂತಪುರ: ಆರ್‌ಎಸ್ ಎಸ್ ರಾಷ್ಟ್ರೀಯ ನೇತಾರ ದತ್ತಾತ್ರೇ ಯ ಹೊಸಬಾಳೆಯವರನ್ನು ನಾನು ಸಂದರ್ಶಿಸಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದೆನೆಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆಯುಳ್ಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್. ಅಜಿತ್ ಕುಮಾರ್ ತಿಳಿಸಿದ್ದಾರೆ.
ಆರ್‌ಎಸ್‌ಎಸ್ ನೇತಾರ ರೊಂದಿಗೆ ಎಡಿಜಿಪಿ ಸಮಾಲೋಚನೆ ನಡೆಸಿದ್ದರೆಂದು ವಿಪಕ್ಷಗಳು ಆರೋಪಿಸಿದ್ದವು. ಮಾತ್ರವಲ್ಲದೆ ಯಾವ ಉದ್ದೇಶದಿಂದ ಅವರಿಬ್ಬರು ಸಂದರ್ಶನ ನಡೆಸಿದ್ದಾರೆ ಎಂದು ಕೂಡಾ ಪ್ರಶ್ನಿಸಿದ್ದುವು. ಆ ಬಗ್ಗೆ ಮುಖ್ಯಮಂತ್ರಿಯವರ ಕಚೇರಿ ಎಡಿಜಿಪಿಯಿಂದ ಸ್ಪಷ್ಟೀಕರಣ ಕೇಳಿತ್ತು. ಇದರಂತೆ ಎಡಿಜಿಪಿ ನೀಡಿದ ಸ್ಪಷ್ಟೀಕರಣದಲ್ಲಿ ಆರ್‌ಎಸ್‌ಎಸ್ ನೇತಾರರೊಂದಿಗೆ ಸಮಾಲೋಚನೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.
ತೃಶೂರಿನ ಪಾರಮೇಕಾವಿನ ವಿದ್ಯಾಮಂದಿರದಲ್ಲಿ 2023 ಮೇ ತಿಂಗಳಲ್ಲಿ ನಡೆದ ಆರ್‌ಎಸ್‌ಎಸ್‌ನ ಶಿಬಿರದಲ್ಲಿ ಪಾಲ್ಗೊಳ್ಳಲೆಂದು ಆರ್‌ಎಸ್‌ಎಸ್ ನೇತಾರ ದತ್ತಾತ್ರೇಯ ಹೊಸಬಾಳೆ ತೃಶೂರಿಗೆ ಬಂದಾಗ ಅಲ್ಲಿನ ಹೋಟೆಲೊಂದರಲ್ಲಿ ಮೇ 22ರಂದು ನಾನು ಅವರನ್ನು ಸಂದರ್ಶಿಸಿದ್ದೆ. ಅದು ನನ್ನ ಖಾಸಗಿ ಸಂದರ್ಶನವಾಗಿತ್ತೆಂದು ಮುಖ್ಯಮಂತ್ರಿ ಕಚೇರಿಗೆ ಎಡಿಜಿಪಿ ನೀಡಿದ ಸ್ಪಷ್ಟೀಕರಣದಲ್ಲ್ಲಿ ಹೇಳಿದ್ದಾರೆ.
ಈ ಸಂದರ್ಶನ ರಾಜ್ಯ ರಾಜಕೀಯದಲ್ಲಿ ಭಾರೀ ವಾಕ್ಸಮರಕ್ಕೂ ದಾರಿ ಮಾಡಿಕೊಟ್ಟಿದೆ. ಆರ್‌ಎಸ್‌ಎಸ್‌ನೊಂದಿಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಎಡಿಜಿಪಿಯವರನ್ನು ನೇಮಿಸಿದ್ದರೆಂದು ವಿಪಕ್ಷ ನಾಯಕ ವಿ.ಡಿ. ಸತೀಶನ್ ಆರೋಪಿಸಿದ್ದಾರೆ. ಆ ಸಂದರ್ಶನದ ಹಿಂದೆ ಸರಕಾರದ ಕೆಲವು ಕಾರ್ಯ ಸೂಚಿಗಳಿವೆ. ಅಧಿಕೃತ ಪೊಲೀಸ್ ವಾಹನವನ್ನು ಹೊರತುಪಡಿಸಿ ವಿಜ್ಞಾನ ಭಾರತಿಯ ಪದಾಧಿಕಾರಿಯೋರ್ವ ಚಲಾಯಿಸುತ್ತಿದ್ದ ಕಾರಿನಲ್ಲಿ ಎಡಿಜಿಪಿ ಯವರು ಸಂದರ್ಶನಕ್ಕಾಗಿ ತೆರಳಿದ್ದು ಇದರ ಹಿಂದಿನ ನಿಗೂಢತೆ ಏನೆಂ ಬುದನ್ನು ಸರಕಾರ ಬಯಲು ಪಡಿಸಬೇಕೆಂದು ವಿ.ಡಿ.ಸತೀಶನ್ ಆಗ್ರಹಪಟ್ಟಿದ್ದಾರೆ.
ತೃಶೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ರಾಜಕೀಯ ಲಾಭ ಉಂಟಾಗುವಂತೆ ಮಾಡುವ ನಿಗೂಢ ಕಾರ್ಯಸೂಚಿ ಎಡಿಜಿಪಿಯವರ ಸಂದರ್ಶನದಲ್ಲಿ ಇತ್ತೆಂಬುವುದನ್ನು ಇದು ಸೂಚಿಸುತ್ತದೆ ಎಂದು ಮಾಜಿ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಕೂಡಾ ಆರೋಪಿಸಿದ್ದಾರೆ. ಎಡಿಜಿಪಿ ಮತ್ತು ಆರ್‌ಎಸ್‌ಎಸ್ ನೇತಾರರ ಮಧ್ಯೆಗಿನ ಸಂದರ್ಶನದ ಉದ್ದೇಶ ಬಗ್ಗೆ ತನಿಖೆ ನಡೆಸಬೇಕೆಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಆಗ್ರಹಪಟ್ಟಿದ್ದಾರೆ. ಆದರೆ ಎಡಿಜಿಪಿಯವರ ಸಂದರ್ಶನದ ಬಗ್ಗೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್‌ರೊಂದಿಗೆ ಸುದ್ದಿಗಾರರು ಪ್ರಶ್ನಿಸಿದಾಗ ಈ ಪ್ರಶ್ನೆಯನ್ನು ಎಡಿಜಿಪಿಯವರಲ್ಲೇ ಕೇಳಿ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆಯಾಗಿ ಎಡಿಜಿಪಿ ಹಾಗೂ ಆರ್‌ಎಸ್‌ಎಸ್ ನೇತಾರರ ಸಂದರ್ಶನ ರಾಜ್ಯದ ರಾಜಕೀಯದಲ್ಲಿ ಭಾರೀ ಕಾವೇರಿಸುವಂತೆ ಮಾಡಿದೆ.