ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಗೊಂಡ 16ರ ಬಾಲಕಿಯನ್ನು ಕೊಂಡೊಯ್ದು ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸು
ಕಾಸರಗೋಡು: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಗೊಂಡ 16ರ ಬಾಲಕಿಯನ್ನು ತಳಿಪರಂಬ್‌ನ ವಸತಿಗೃಹಕ್ಕೆ ತಲುಪಿಸಿ ದೌರ್ಜನ್ಯಗೈದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದರು. ತಳಿಪರಂಬ್ ನಿವಾಸಿ ರಾಜೇಶ್ ಯಾನೆ ಅರ್ಜುನನ ವಿರುದ್ಧ ಚಿತ್ತಾರಿಕಲ್ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಬಾಲಕಿ ಚಿತ್ತಾರಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದಾಳೆ. ಪತ್ನಿ ಹಾಗೂ ಮಕ್ಕಳಿರುವ ರಾಜೇಶ್ ಬಾಲಕಿಯನ್ನು ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಗೊಂಡ ಬಳಿಕ 2024 ಜುಲೈಯಲ್ಲಿ ಪ್ರಥಮವಾಗಿ ದೌರ್ಜನ್ಯಗೈದಿದ್ದಾನೆ ಎನ್ನಲಾಗಿದೆ.
ಕಾರು ಸಹಿತ ತಲುಪಿ ಬಾಲಕಿಯನ್ನು ಕರೆದುಕೊಂಡು ಹೋಗಿ ತಳಿಪರಂಬ್‌ನಲ್ಲಿ ಆರೋಪಿ ವಾಸಿಸುವ ಕೊಠಡಿಯಲ್ಲಿ ದೌರ್ಜನ್ಯಗೈಯ್ಯಲಾಗಿದೆ. 2024 ಅಕ್ಟೋಬರ್‌ನಲ್ಲಿ ಇದೇ ರೀತಿ ಮತ್ತೊಮ್ಮೆ ದೌರ್ಜನ್ಯ ಗೈಯ್ಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಆರೋಪಿ ಬಾಲಕಿಯಲ್ಲಿ ಹೇಳಿದ ಹೆಸರು ಸತ್ಯವೋ ಎಂಬ ಬಗ್ಗೆಯೂ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದಾರೆ.