ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ: ಚಿನ್ನ, ಪೆಟ್ರೋಲಿಯಂ ಬೆಲೆ ಗಗನಕ್ಕೆ
ತಿರುವನಂತಪುರ: ಇಸ್ರೇಲ್-ಹಮಾಸ್ ಯುದ್ಧ ಶಮನಗೊಳ್ಳದೆ ಇನ್ನೂ ತೀವ್ರರೂಪದಲ್ಲಿ ಮುಂದು ವರಿಯುತ್ತಿರುವಂತೆ, ಅದರ ಪರಿ ಣಾಮ ಚಿನ್ನ ಮತ್ತು ತೈಲೋತ್ಪನ್ನಗಳ ಬೆಲೆ ಗಗನಕ್ಕೇರುವಂತೆ ಮಾಡಿದೆ.
ಪವನ್ ಒಂದರ ಚಿನ್ನದ ಬೆಲೆ ಇಂದು ದಿಢೀರ್ ಆಗಿ ೧೧೨೦ ರೂ. ಏರಿಕೆಯುಂಟಾಗಿ ಅದು ಈಗ ೪೪,೩೨೦ಕ್ಕೆ ತಲುಪಿದೆ. ಒಂದು ಗ್ರಾಂ ಚಿನ್ನದ ಬೆಲೆ ೫೫೪೦ ರೂ.ಗೇರಿದೆ. ಇಂದು ಮಾತ್ರವಾಗಿ ೧ ಗ್ರಾಂ ಚಿನ್ನದ ಬೆಲೆಯಲ್ಲಿ ೧೪೦ರೂ.ನಷ್ಟು ಏರಿಕೆಯುಂಟಾಗಿದೆ. ಕಳೆದ ಅಕ್ಟೋಬರ್ ೧ರಂದು ಚಿನ್ನದ ಬೆಲೆ ಪವನ್‌ಗೆ ೪೨,೬೮೦ ರೂ. ಆಗಿತ್ತು. ಅದು ಈಗ ೪೪,೩೨೦ ರೂ.ಗೇರಿದೆ.
ಯುದ್ಧದ ಪರಿಣಾಮ ಚಿನ್ನ ಮಾತ್ರವಲ್ಲ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆಯನ್ನೂ ಇನ್ನೊಂದೆಡೆ ಗಗನಕ್ಕೇರುವಂತೆ ಮಾಡತೊಡಗಿದೆ. ಅದರ ನೇರ ಪರಿಣಾಮ ಭಾರತಕ್ಕೆ ಬೀರತೊಡಗಿದ್ದು, ಅದರಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ದರ ಇನ್ನಷ್ಟು ಏರುವುದಂತೂ ಖಚಿತಗೊಂಡಂತಾಗಿದೆ.
ಯುದ್ಧ ಕೊನೆಗೊಂಡ ಬಳಿಕವಷ್ಟೇ ಬೆಲೆಯೇರಿಕೆ ಇಳಿಯುವ ಸಾಧ್ಯತೆಯಿದೆಯೆಂದು ಅಂತಾರಾಷ್ಟ್ರೀಯ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.