ಕಾರಡ್ಕ ಸಹಕಾರಿ ಸಂಘದಲ್ಲಿ ವಂಚನೆ: ನ್ಯಾಯಾಲಯದಲ್ಲಿ ಶರಣಾದ ಬಿಜೆಪಿ ನೇತಾರ

ಕಾಸರಗೋಡು: ಕಾರಡ್ಕ ಕೃಷಿ ಕ್ಷೇಮ ಸಹಕಾರಿ ಸಂಘದಲ್ಲಿ ನಡೆದ ವಂಚನೆ ಪ್ರಕರಣದಲ್ಲಿ 8ನೇ ಆರೋಪಿಯಾದ ಬಿಜೆಪಿ ನೇತಾರ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ. ಬಿಜೆಪಿ ಮಾಜಿ ಜಿಲ್ಲಾ ಸಮಿತಿ ಸದಸ್ಯನೂ, ಕಾಞಂಗಾಡ್ ನಗರಸಭೆಯ ಮಾಜಿ ಕೌನ್ಸಿಲರ್ ಆಗಿರುವ ಅಜಯ ಕುಮಾರ್ ನೆಲ್ಲಿಕಾಡ್ ಕಾಸರಗೋಡು ಜ್ಯುಡೀಶಿಯಲ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1)ದಲ್ಲಿ ಶರಣಾಗಿದ್ದಾನೆ. ನ್ಯಾಯಾಲಯ ಈತನಿಗೆ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಸಹಕಾರಿ ಸಂಘದಿಂದ ಸೆಕ್ರಟರಿಯಾದ ಮಾಜಿ ಸಿಪಿಎಂ ಲೋಕಲ್ ಕಮಿಟಿ ಸದಸ್ಯ ಕರ್ಮಂ ತೋಡಿಯ ರತೀಶನ್ ಲಪಟಾಯಿಸಿದ ಚಿನ್ನಾಭರಣಗಳನ್ನು ಬೇರೆಡೆ ಅಡವಿ ರಿಸಲು ಸಹಾಯ ಒದಗಿಸಿರುವುದರಿಂದ ಅಜಯ ಕುಮಾರ್ ನೆಲ್ಲಿಕಾಡ್‌ನನ್ನು ಈ ವಂಚನಾ ಪ್ರಕರಣದಲ್ಲಿ ಆರೋಪಿಯಾಗಿ ಸೇರಿಸಲಾಗಿದೆ. ಅಜಯ ಕುಮಾರ್‌ನ ಸಹೋದರ ಅನಿಲ್ ಕುಮಾರ್ ನೆಲ್ಲಿಕಾಡ್‌ನನ್ನು ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿತ್ತು.

 ಕ್ರೈಂಬ್ರಾಂಚ್‌ನ ಆರ್ಥಿಕ ಅಪರಾಧ ತನಿಖೆ ವಿಭಾಗ ಈ ವಂಚನಾ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಸಿಪಿಎಂ ನಿಯಂತ್ರಣ ದಲ್ಲಿರುವ ಸಹಕಾರಿ ಸಂಘದಿಂದ ಅಡವಿರಿಸಿದ ಚಿನ್ನಾಭರಣಗಳನ್ನು ಲಪಟಾಯಿಸಿ 4.76 ಕೋಟಿ ರೂ.ಗಳ ವಂಚನೆ ನಡೆಸಲಾಗಿದೆ. 2024 ಮೇ 14ರಂದು ಸಂಘದಲ್ಲಿ ಅಡವಿರಿಸಿದ ಚಿನ್ನಾಭರಣವನ್ನು ವಿವಿಧ ಹೆಸರುಗಳಲ್ಲಿ ಅಡವಿರಿಸಿರುವುದಾಗಿ ತೋರಿಸಿ ಲಾಕರ್‌ನಿಂದ ಚಿನ್ನಾಭರಣಗಳನ್ನು ಕೊಂಡೊಯ್ದು ಸೆಕ್ರಟರಿಯ ನೇತೃತ್ವದಲ್ಲಿ ವಂಚನೆ ನಡೆಸಲಾಗಿದೆ. 44 ಪ್ಯಾಕೆಟ್‌ಗಳಲ್ಲಿ ಭದ್ರವಾಗಿ ಇರಿಸಿದ್ದ 2.66 ಕಿಲೋ ಚಿನ್ನವನ್ನು ರತೀಶನ್ ಸೊಸೈಟಿ ಲಾಕರ್‌ನಿಂದ ಸಾಗಿಸಿದ್ದನು.

ಈ ಚಿನ್ನಾಭರಣಗಳನ್ನು ಬಳಿಕ ಕೇರಳ ಬ್ಯಾಂಕ್‌ನ ಕಾಞಂಗಾಡ್ ಶಾಖೆ, ಕೆನರಾ ಬ್ಯಾಂಕ್‌ನ ಪೆರಿಯಾ, ಪಳ್ಳಿಕ್ಕೆರೆ ಶಾಖೆಗಳಲ್ಲಿ ಅಡವಿರಿಸಲಾ ಗಿತ್ತು. ಪ್ರಕರಣದಲ್ಲಿ ಒಟ್ಟು 11 ಮಂದಿ ಆರೋಪಿಗಳಿದ್ದಾರೆ. ಸೆಕ್ರಟರಿಯಾಗಿದ್ದ ರತೀಶನ್ ಈ ಪ್ರಕರಣದಲ್ಲಿ ಪ್ರಥಮ ಆರೋಪಿಯಾಗಿದ್ದಾನೆ. ಪಯ್ಯನ್ನೂರಿ ನಲ್ಲಿ ವಾಸಿಸುವ ಕಣ್ಣೂರು ನಿವಾಸಿ ಜಬ್ಬಾರ್ ಯಾನೆ ಮಂಜಕಂಡಿ ಜಬ್ಬಾರ್, ಕಲ್ಲಿಕೋಟೆ ಅರಕ್ಕಿಣರ್ ನಿವಾಸಿ  ಸಿ. ನಬಿಲ್, ಬೇಕಲ್ ಹದ್ದಾದ್ ನಗರದ ಕೆ.ಅಹಮ್ಮದ್ ಬಷೀರ್, ಎ. ಅಬ್ದುಲ್ ಗಫೂರ್ ಎಂಬಿವರನ್ನು ಈ ಹಿಂದೆ ಬಂಧಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page