ಕಾರ್ಖಾನೆಯಿಂದ ಮಲಿನ ಜಲ ಹರಿಯಬಿಟ್ಟ ಮಾಲಕನಿಗೆ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ 5೦,೦೦೦ ರೂ. ದಂಡ
ವರ್ಕಾಡಿ: ಪಂಚಾಯತ್‌ನ ೨ನೇ ವಾರ್ಡ್ ಕೆದುಂಬಾಡಿಯಲ್ಲಿ ಕೆಲವು ಮನೆಗಳ ಬಾವಿಗಳ ನೀರಿನಲ್ಲಿ ಬಣ್ಣ ವ್ಯತ್ಯಾಸ ಉಂಟಾಗುತ್ತಿದೆ ಎಂದು ಸಮೀಪದ ಒರತೆಯಲ್ಲಿ ಕಪ್ಪು ಮಿಶ್ರಿತ ಮಲಿನ ಜಲ ಹರಿಯುತ್ತಿದೆ ಎಂದು ಲಭಿಸಿದ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನ ನೇತೃತ್ವದಲ್ಲಿ ಪರಿಶೋಧನೆ ನಡೆಸಲಾ ಯಿತು. ಗಡಿಪ್ರದೇಶದ ಕರ್ನಾಟಕ ವ್ಯಾಪ್ತಿಯಲ್ಲಿ ಮಂಜೇಶ್ವರ ನಿವಾಸಿಯ ಮಾಲಕತ್ವದಲ್ಲಿರುವ ಗೇರುಬೀಜ ಕಾರ್ಖಾನೆಯಲ್ಲಿ ಎಣ್ಣೆ ಉತ್ಪಾದಿಸುವ ವೇಳೆ ಮಲಿನ ಜಲವನ್ನು ಕೆಳಗಿನ ಭಾಗದಲ್ಲಿರುವ ಕೆಂಪು ಕಲ್ಲಿನ ಕೋರೆಗೆ ಹರಿಯಬಿಟ್ಟಿರುವುದೇ ಪರಿಸರದಲ್ಲಿ ಮಲಿನೀಕರಣಕ್ಕೆ ಕಾರಣವಾಗಿರುವು ದೆಂದು ಪತ್ತೆಹಚ್ಚಲಾಗಿದೆ. ಕಳೆದ ಒಂದು ವರ್ಷದಿಂದ ಗೇರುಬೀಜದ ಸಿಪ್ಪೆಯಿಂದ ಎಣ್ಣೆ ತೆಗೆಯುವ ಕಾರ್ಖಾನೆ ಇಲ್ಲಿ ಕಾರ್ಯಾಚರಿಸುತ್ತಿದೆಯಾದರೂ ಮಲಿನ ಜಲವನ್ನು ಸಂಸ್ಕರಿಸುವುದಕ್ಕಿರುವ ಯಾವುದೇ ವ್ಯವಸ್ಥೆ ಕೈಗೊಳ್ಳಲಾಗಿಲ್ಲ. ಕಾನೂನು ಉಲ್ಲಂಘನೆ ನಡೆಸಿದ ಹಿನ್ನೆಲೆಯಲ್ಲಿ ಮಾಲಕನಿಗೆ ಪಂಚಾಯತ್ ರಾಜ್ ಆಕ್ಟ್ ಪ್ರಕಾರ 5೦,೦೦೦ ರೂ. ದಂಡ ಹೇರಲು ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ನಿರ್ದೇಶ ನೀಡಲಾಗಿದೆ.
ಕಾರ್ಖಾನೆಯಿಂದ ಹೊರಬರುವ ಮಲಿನ ಜಲವನ್ನು ಅಲ್ಲೇ ಪರಿಸರದಲ್ಲಿ ಸಂಸ್ಕರಿಸಲು, ಅಗತ್ಯವಿದ್ದರೆ ಜಿಲ್ಲಾಡಳಿತದ ಮೂಲಕ ಸೆಂಟ್ರಲ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್‌ನೊಂದಿಗೆ ಸಂಪರ್ಕಿಸಿ ಮುಂದಿನ ಕ್ರಮ ಸ್ವೀಕರಿಸಲು ನಿರ್ದೇಶ ನೀಡಲಾಯಿತು. ತಪಾಸಣಾ ತಂಡದಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನ ಲೀಡರ್ ಕೆ.ವಿ. ಮೊಹಮ್ಮದ್ ಮದನಿ, ಪಂಚಾಯತ್ ಕಾರ್ಯದರ್ಶಿ ಅಜಿತ್ ಎಚ್, ಅಸಿಸ್ಟೆಂಟ್ ಸೆಕ್ರೆಟರಿ ಐತ್ತಪ್ಪ ನಾಯ್ಕ್, ಹೆಲ್ತ್ ಇನ್ಸ್‌ಪೆಕ್ಚರ್ ಜಾಸ್ಮಿನ್ ಕೆ, ಕ್ಲರ್ಕ್ ಹರಿತ ಆರ್, ಸ್ಕ್ವಾಡ್ ಸದಸ್ಯ ಟಿ.ಸಿ. ಶೈಲೇಶ್ ಭಾಗವಹಿಸಿದರು.