ಕೇಂದ್ರ ಸರಕಾರದ ಮಹತ್ವದ ಕ್ರಮ: ಉಚಿತ ರೇಶನ್ ಯೋಜನೆ ಇನ್ನೂ ಐದು ವರ್ಷತನಕ ವಿಸ್ತರಣೆ
ಹೊಸದಿಲ್ಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಪ್ರಕಾರ ವಿರುವ ಉಚಿತ ರೇಶನ್ ಆಹಾರ ಧಾನ್ಯಗಳ ವಿತರಣೆಯನ್ನು ೨೦೨೪ ಜನವರಿ ೧ರಿಂದ ಮುಂದಿನ ಐದು ವರ್ಷದ ತನಕ ವಿಸ್ತರಿಸುವ ಮಹತ್ವದ ತೀರ್ಮಾನ ಕೇಂದ್ರ ಸಚಿವ ಸಂಪುಟ ಸಭೆ ಕೈಗೊಂಡಿದೆ. ಪಂಚ ರಾಜ್ಯಗಳಿಗೆ ನಡೆದ ಚುನಾವಣಾ ಪ್ರಚಾರದ ವೇಳೆ ಉಚಿತ ರೇಶನ್ ವಿತರಣೆಯನ್ನು ಇನ್ನೂ ಐದು ವರ್ಷ ತನಕ ವಿಸ್ತರಿಸಲಾಗುವು ದೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ದರು. ಅದನ್ನು ಈಗ ಕೇಂದ್ರ ಸರಕಾರ ಸಾಕಾರಗೊಳಿಸಿದೆ. ಈ ಯೋಜನೆಯ ಪ್ರಕಾರ ರೇಶನ್ ಕಾರ್ಡ್ನ ಪ್ರತೀ ಸದಸ್ಯರಿಗೆ ತಲಾ ಐದು ಕಿಲೋದಂತೆ ಹಾಗೂ ಅಂತ್ಯೋದಯ ಯೋಜನೆ ಪ್ರಕಾರದ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ತಲಾ ೩೫ ಕಿಲೋದಂತೆ ಉಚಿತ ಆಹಾರಧಾನ್ಯ ಲಬಿಸಲಿದೆ.
ಪ್ರಸ್ತುತ ಈ ಯೋಜನೆಯನ್ನು ಇನ್ನೂ ಐದು ವರ್ಷ ತನಕ ವಿಸ್ತರಿಸಿದ ಹಿನ್ನೆಲೆಯಲ್ಲಿ ದೇಶದ ೮೧.೩೫ ಕೋಟಿ ಮಂದಿಗೆ ಇದರ ಪ್ರಯೋಜನ ಲಭಿಸಲಿದೆ.
ಇದು ಒಟ್ಟು ೧೧.೮೦ ಲಕ್ಷ ಕೋಟಿ ರೂ. ವ್ಯಯಿಸಬೇಕಾಗಿ ಬರುವ ಯೋಜನೆಯಾಗಿದೆ ಇದು. ಮಾತ್ರವಲ್ಲ ೮೧.೩೫ ಕೋಟಿ ಮಂದಿಗೆ ಆಹಾರ ಭದ್ರತೆ ಖಾತರಿಗೊಳಿಸುವ ಈ ಯೋಜನೆ ಇಡೀ ವಿಶ್ವದಲ್ಲೇ ಅತೀ ದೊಡ್ಡ ಸಮಾಜ ಕಲ್ಯಾಣ ಯೋಜನೆಯಾಗಿದೆಯೆಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಉಚಿತ ರೇಶನ್ ವಿತರಣೆ ಯೋಜನೆಯನ್ನು ಕೇಂದ್ರ ಸರಕಾರ ಕೋವಿಡ್ ಮಹಾಮಾರಿ ವೇಳೆಯಲ್ಲಿ ಮೊತ್ತಮೊದಲಾಗಿ ಜ್ಯಾರಿಗೊಳಿಸಿತ್ತು. ಬಳಿಕ ಅದನ್ನು ಪದೇ ಪದೇ ವಿಸ್ತರಿಸಲಾಗಿತ್ತು. ಈಗ ಅದನ್ನು ಮತ್ತೆ ಐದು ವರ್ಷ ತನಕ ವಿಸ್ತರಿಸಿಸಲಾಗಿದೆ.