ಗ್ಯಾಸ್ ಸಿಲಿಂಡರ್ ಸಾಗಾಟ ವಾಹನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಮನೆಗೆ ಹಾನಿ: ಅಪಾಯದಿಂದ ಪಾರಾದ ಕುಟುಂಬ
ಉಪ್ಪಳ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಮನೆಗೆ ಹಾನಿಯುಂಟಾದ ಘಟನೆ ನಡೆದಿದೆ. ಉಪ್ಪಳ ಬಳಿಯ ಪತ್ವಾಡಿ ನಿವಾಸಿ ಹರೀಶ್ ಕುಮಾರ್ ಎಂಬವರ ಮನೆ ಹಿಂಭಾಗಕ್ಕೆ ವಾಹನ ಮಗುಚಿ ಬಿದ್ದು ಮನೆ ಹಾನಿಗೊಂಡಿದೆ. ನಿನ್ನೆ ಬೆಳಿಗ್ಗೆ ಸುಮಾರು 10 ಗಂಟೆ ವೇಳ ಅಪಘಾತ ಸಂಭವಿಸಿದೆ. ವಾಹನ ಈ ಪ್ರದೇಶದ ಎತ್ತರದ ರಸ್ತೆಯಿಂದ ಸಂಚರಿಸುತ್ತಿರುವ ವೇಳೆ ಮುಂದೆ ಹೋಗಲು ಸಾಧ್ಯವಾಗದೆ ಹಿಂದಕ್ಕೆ ಚಲಿಸಿ ನಿಯಂತ್ರಣ ತಪ್ಪಿ ಕೆಳಭಾಗದಲ್ಲಿದ್ದ ಹರೀಶ್ ಕುಮಾರ್ ಎಂಬವರ ಮನೆಯ ಹಿಂಭಾಗಕ್ಕೆ ಮಗುಚಿ ಬಿದ್ದಿದೆ. ಇದರಿಂದ ಅಡುಗೆ ಕೋಣೆ ಭಾಗದ ತಗಡು ಶೀಟ್ ಹಾನಿಗೊಂಡಿದೆ. ಮನೆಯವರು ಈ ವೇಳೆ ಎದುರು ಭಾಗದಲ್ಲಿದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಉಪ್ಪಳದ ಅಗ್ನಿಶಾಮಕದಳ ತಲುಪಿ ಚೆಲ್ಲಾಪಿಲ್ಲಿಗೊಂಡಿರುವ ಗ್ಯಾಸ್ ತುಂಬಿದ ಸಿಲಿಂಡರ್‌ನ್ನು ತೆರವುಗೊಳಿಸಿ ಸೋರಿಕೆ ಇದೆಯೇ ಎಂದು ತಪಾಸಣೆ ನಡೆಸಿದರು. ವಾಹನದಲ್ಲಿದ್ದ ಚಾಲಕ ಹಾಗೂ ಸಹಾಯಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಕ್ರೈನ್ ಮೂಲಕ ವಾಹನವನ್ನು ತೆರವುಗೊಳಿಸಲಾಯಿತು.