ಚಂದ್ರನ ಅಂಗಳದಲ್ಲಿ ಇಂದು ಸಂಜೆ ತ್ರಿವಿಕ್ರಮನ ಪಾದಸ್ಪರ್ಶ
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪ ತಲುಪಿದೆ. ೧೪೦ ಕೋಟಿ ಭಾರತೀಯರ ಶುಭ ಹಾರೈಕೆ ಹಾಗೂ ಪ್ರಾರ್ಥನೆ ಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಚಂದ್ರಯಾನ-೩ ನೌಕೆ ಇಂದು ಸಂಜೆ ೬:೦೪ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಜ್ಜಾಗಿದ್ದು, ಈ ಐತಿಹಾಸಿಕ ಸಂದರ್ಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಚಂದ್ರಯಾನ-೩ ಲ್ಯಾಂಡರ್ ಮೊಡ್ಯೂಲ್ (ಎಲ್‌ಎಂ) ಭಾರತೀಯ ವಿಜ್ಞಾನಿಗಳ ಜಾಣ್ಮೆ ನಿರ್ಣಯ, ಪ್ರಾಮಾಣಿಕತೆ ಮತ್ತು ಕಟೀಬದ್ದತೆಗೆ ಸಾಕ್ಷಿಯಾಗಿದೆ. ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಒಳಗೊಂಡಿರುವ ಎಲ್.ಎಂ ಚಂದ್ರನ ಭೂ ಪ್ರದೇಶದಲ್ಲಿ ಅತ್ಯಂತ ಸುರಕ್ಷಿತ ವಾಗಿ ಹಾಗೂ ಹಗುರವಾಗಿ ಚಂದ್ರನ ನೆಲವನ್ನು ಸ್ಪರ್ಶಿಸಿರುವ ಮೂಲಕ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ.
ಇಂದು ಸಂಜೆ ೬:೦೪ ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ವಿಕ್ರಮ್ ಸುರಕ್ಷಿತವಾಗಿ ಚಂದ್ರನ ಅಂಗಳಕ್ಕೆ ಇಳಿದರೆ, ವಿಶ್ವದಲ್ಲಿ ವಿಕ್ರಮ ಸಾಧಿಸಿದ ಗರಿಮೆ ಇಸ್ರೋ ಪಾಲಿಗೆ ಒದಗಿಬರಲಿದೆ. ಇದು ಭಾರತಕ್ಕೆ ಐತಿಹಾಸಿಕ ಮೈಲುಗಲ್ಲಾಗಲಿದೆ. ಮಾತ್ರವಲ್ಲ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಸಂಕೀರ್ಣ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಳ್ಳ ಲಿದೆ. ಅಮೆರಿಕ, ಚೀನಾ ಮತ್ತು ರಷ್ಯಾ ಎಂಬೀ ನಾಲ್ಕು ರಾಷ್ಟ್ರಗಳು ಮಾಡಿರುವ ಸಾಧನೆಯ ಶ್ರೇಣಿಗೆ ಭಾರತವೂ ಸೇರಲಿದೆ. ಯಶಸ್ವಿ ಲ್ಯಾಂಡಿಂಗ್‌ಗಾಗಿ ದೇಶದ ಮೂಲೆ ಮೂಲೆಗಳಲ್ಲಿ ವಿಶೇಷ ಪೂಜೆಗಳೂ ನಡೆಯುತ್ತಿವೆ.
ಜುಲೈ ೧೪ರಂದು ಚಂದ್ರಯಾನ-೩ ಲ್ಯಾಂಡರ್ ಮೊಡ್ಯೂಲ್ ಮಿಷನ್ ಪ್ರಾರಂಭವಾಗಿತ್ತು. ಅಂದು ಉಡಾವ ಣೆಗೊಂಡ ನಂತರ ಆಗಸ್ಟ್ ೩ರಂದು ನೌಕೆ ಚಂದ್ರನ ಕಕ್ಷೆ ಪ್ರವೇಶಿಸಿತ್ತು. ೩೫ ದಿನಗಳ ಪ್ರಯಾಣದ ಬಳಿಕ ಈ ಬಾಹ್ಯಾಕಾಶ ನೌಕೆ ಈಗ ಚಂದ್ರನ ಸನಿಹ ತಲುಪಿದೆ. ಚಂದ್ರನ ಮೇಲೆ ಲ್ಯಾಂಡಿಂಗ್‌ಗೆ ಸಜ್ಜಾಗಿ ನಿಂತಿದೆ.