ಜನರಲ್ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ: 400 ಕೆವಿಎ ಜನರೇಟರ್ ಕಾರ್ಯಾರಂಭ
ಕಾಸರಗೋಡು: ವಿದ್ಯುತ್ ಮೊಟಕುಗೊಂಡರೂ ಇನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಚಟುವಟಿಕೆಗಳು ಮೊಟಕಾಗದು. ತೆಕ್ಕಿಲ್ ಟಾಟಾ ಆಸ್ಪತ್ರೆಯಿಂದ ತಂದ 400 ಕೆವಿಎ ಜನರೇಟರ್ ಜನರಲ್ ಆಸ್ಪತ್ರೆಯಲ್ಲಿ ಕಾರ್ಯಾರಂಭಗೊಳಿಸಲಾಗಿದೆ. ಇದರ ಉದ್ಘಾಟನೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ನಿರ್ವಹಿಸಿದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದರು. ತೆಕ್ಕಿಲ್ ಟಾಟಾ ಆಸ್ಪತ್ರೆಯಲ್ಲಿ ಉಪಯೋಗಶೂನ್ಯವಾಗಿದ್ದ ಈ ಜನರೇಟರನ್ನು ಜನರಲ್ ಆಸ್ಪತ್ರೆಗೆ ತಲುಪಿಸಿ ಸ್ಥಾಪಿಸಲಾಗಿತ್ತು.
ಜನರಲ್ ಆಸ್ಪತ್ರೆಯಲ್ಲಿ ವಿದ್ಯುತ್ ಮೊಟಕುಗೊಂಡರೆ ಸಿಟಿ ಸ್ಕ್ಯಾನ್ ಸಹಿತ ವಿವಿಧ ಸೇವೆಗಳು ಮೊಟಕಾಗುವ ಸ್ಥಿತಿಯಿತ್ತು. ಆದರೆ ಇನ್ನು ಮುಂದೆ ಈ ಸಮಸ್ಯೆಗೆ ಪರಿಹಾರ ಉಂಟಾಗಿದೆ.
ನಗರಸಭೆಯ ಪ್ರತ್ಯೇಕ ಯೋಜನೆಯಲ್ಲಿ ಸೇರಿಸಿ ಮಂಜೂರುಗೊಳಿಸಿದ ಮೊತ್ತ ಉಪಯೋಗಿಸಿ ಜನರೇಟರನ್ನು ಆಸ್ಪತ್ರೆಗೆ ತರಲಾಗಿದೆ. ಜನರೇಟರ್ ಸ್ಥಾಪಿಸಲು ಇರುವ ಫೌಂಡೇಶನ್ ಸಿದ್ಧಪಡಿಸಲು 75,೦೦೦ ರೂ. ಆಸ್ಪತ್ರೆಯ ಅಭಿವೃದ್ಧಿ ಸಮಿತಿ ನಿಧಿಯಿಂದ ಮಂಜೂರು ಮಾಡಲಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸುಪರಿಂಟೆಂಡೆಂಟ್ ಶ್ರೀಕುಮಾರ್ ಮುಗು ಸ್ವಾಗತಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಹೀರ್ ಆಸಿಫ್, ಖಾಲಿದ್ ಪಚ್ಚಕ್ಕಾಡ್, ಆಸ್ಪತ್ರೆ ಅಭಿವೃದ್ಧಿ ಸಮಿತಿ ಸದಸ್ಯ ಭಾಸ್ಕರನ್, ಜವಾದ್ ಪುತ್ತೂರು, ನರ್ಸಿಂಗ್ ಸುಪರಿಂಟೆಂಡೆಂಟ್ ಲತಾ, ಪಿಆರ್‌ಒ ಸಲ್ಮಾ, ಬಾಲಸುಬ್ರಹ್ಮಣ್ಯ, ರಾಧಾಕೃಷ್ಣನ್, ಡಾಕ್ಟರ್‌ಗಳು, ನೌಕರರು ಭಾಗವಹಿಸಿದರು.