ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಆರೋಪಿಯ ನಿಗೂಢ ಸಾವು: ಮೃತದೇಹ ಪರಿಯಾರಂಗೆ; ಇಬ್ಬರು ಕಸ್ಟಡಿಯಲ್ಲಿ
ಮಂಜೇಶ್ವರ: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಬಂಧಿಸಿ ಜಾಮೀನಿನಲ್ಲಿ ಬಿಡು ಗಡೆಗೊಳಿಸಿದ ಆರೋಪಿ ನಿಗೂಢವಾಗಿ ಮೃತಪಟ್ಟ ಪ್ರಕರಣದಲ್ಲಿ ತನಿಖೆ ಪೊಲೀಸರು ತೀವ್ರಗೊಳಿಸಿದ್ದಾರೆ. ಘಟನೆಯಲ್ಲಿ ಇಬ್ಬರನ್ನು ಕಸ್ಟಡಿಗೆ ತೆಗೆದ ಪೊಲೀಸರು ಮೃತಪಟ್ಟ ಯುವಕನ ಮೃತದೇಹವನ್ನು ತಜ್ಞ ಪೋಸ್ಟ್ ಮಾರ್ಟಂಗಾಗಿ ಪರಿ ಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಮೀಯಪದವು ಮದಕ್ಕಳದ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರಿಫ್ (೨೨) ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಂಜಾ ಅಮಲಿನಲ್ಲಿ ಗಲಾಟೆ ನಡೆಸುತ್ತಿದ್ದ ಮಧ್ಯೆ ಸ್ಥಳೀಯರು ತಿಳಿಸಿದ ಹಿನ್ನೆಲೆಯಲ್ಲಿ ಮೊಯ್ದೀನ್ ಆರೀಫ್‌ನನ್ನು ಮೊನ್ನೆ ರಾತ್ರಿ ಮಂಜೇಶ್ವರ ಪೊಲೀಸರು ಬಂಧಿಸಿದ್ದರು. ಬಳಿಕ ಸಂಬಂಧಿಕನಾದ ಅಬ್ದುಲ್ ರಶೀದ್ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ದ್ದಾರೆನ್ನಲಾಗಿದೆ. ಬಳಿಕ ಈ ಇಬ್ಬರು ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂತಿರುಗಿದ್ದರೆಂದು ಪೊಲೀಸರು ತಿಳಿಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯಲ್ಲಿ ರಕ್ತವಾಂತಿ ಮಾಡಿದ ಹಿನ್ನೆಲೆಯಲ್ಲಿ ಮೊಯ್ದೀನ್ ಆರೀಫ್‌ನನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರು. ಇದರಂತೆ ಮಂಗಳೂರಿಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ.
ಮೃತದೇಹವನ್ನು ಸಂಜೆಯ ವೇಳೆ ಮನೆಗೆ ತರಲಾಯಿತಾದರೂ ಯುವಕನ ದೇಹದಲ್ಲಿ ಗಾಯಗಳನ್ನು ಪತ್ತೆಹಚ್ಚಿದ ಕಾರಣ ಸ್ಥಳೀಯರು ಶಂಕೆ ವ್ಯಕ್ತಪಡಿಸಿದರು. ಮೃತದೇಹದ ಅಂತ್ಯಕ್ರಿಯೆ ನಡೆಸಬಾರದೆಂದೂ, ಪೋಸ್ಟ್ ಮಾರ್ಟಂ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದರು. ಇದರಂತೆ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಯಿತು.ಪೊಲೀಸರು ಪರಿಶೀಲಿಸಿದಾಗ ಮೃತದೇಹದಲ್ಲಿ ಗಾಯವಿರುವುದನ್ನು ಪತ್ತೆಹಚ್ಚಿದ್ದು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಇದರಿಂದ ತನಿಖೆಯಂಗವಾಗಿ ಮೊಯ್ದೀನ್ ಆರೀಫ್‌ನನ್ನು ಜಾಮೀನಿನಲ್ಲಿ ಪಡೆದುಕೊಂಡು ಮನೆಗೆ ತಲುಪಿದ ಅಬ್ದುಲ್ ರಶೀದ್‌ನಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಮಧ್ಯೆ ಮೊಯ್ದೀನ್ ಆರೀಫ್ ವಾಹನದಿಂದ ಹಾರಿದ್ದನೆಂದೂ ಇದರಿಂದ ಗಾಯವುಂಟಾಗಿದೆಯೆಂದು ಅಬ್ದುಲ್ ರಶೀದ್ ಹೇಳಿಕೆ ನೀಡಿದ್ದರು. ವಾಹನದಿಂದ ಹಾರಿದ ವೇಳೆ ತಲೆಗೆ ಗಾಯವಾಗಿರಬೇಕೆಂದು ಪೊಲೀಸರು ಶಂಕಿಸುತ್ತಿದ್ದಾರೆ. ಹೆಚ್ಚಿನ ಸ್ಪಷ್ಟತೆ ಕಂಡುಕೊಳ್ಳುವುದಕ್ಕಾಗಿ ಮತ್ತೆ ಪ್ರಶ್ನಿಸಿದಾಗ ಮನೆಗೆ ಹಿಂತಿರುಗುವ ವೇಳೆ ಜಗಳವುಂಟಾಗಿದೆಯೆಂದು ಹೇಳಿಕೆ ನೀಡಿದ್ದಾರೆ. ಇದರಿಂದ ಯುವಕನ ಸಾವಿನಲ್ಲಿ ಶಂಕೆ ಇಮ್ಮಡಿಯಾಯಿತು. ಬಳಿಕ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂ ಡೊಯ್ಯಲಾಗಿದ್ದು, ತಜ್ಞ ಪೋಸ್ಟ್ ಮಾರ್ಟಂಗೆ ತೀರ್ಮಾನಿಸಲಾಗಿದೆ. ಇದೇ ವೇಳೆ ಮೊಯ್ದೀನ್ ಆರೀಫ್‌ಗೆ ಪೊಲೀಸ್‌ನಿಂದ ಹಲ್ಲೆ ಉಂಟಾಗಿರುವುದಾಗಿಯೂ ಸಂಬಂಧಿಕರು, ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.