ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ: ನಾಲ್ವರ ಬಂಧನ

ತಿರುವನಂತಪುರ: ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರಗಳಲ್ಲೊಂ ದಾಗಿರುವ ತಿರುಪತಿ (ತಿರುಮಲ) ಕ್ಷೇತ್ರದಲ್ಲಿ  ಲಡ್ಡು ಪ್ರಸಾದ ತಯಾರಿಸಲು ಬಳಸುವ ಹಸುವಿನ ತುಪ್ಪದಲ್ಲಿ ಇತರ ಪ್ರಾಣಿಗಳ ಕೊಬ್ಬು ಕಲಬೆರಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖಾ ತಂಡ ನಾಲ್ವರನ್ನು ಬಂಧಿಸಿದೆ.

ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು  ಪೊಮಿನ್ ಜೈನ್ (ರೂರ್ಕಿ, ಉತ್ತರಾಖಂಡ್), ವೈಷ್ಣವಿ ಡೈರಿಯ (ಪೂನಂಬಾಕ್ಕ), ಸಿಇಒ ಅಪೂರ್ವ ವಿನಯಾ ಕಾಂತ್ ಚಾವ್ಡಾ ಮತ್ತು ಎ.ಆರ್ ಡೈರಿ (ದುಂಡಿಗಲ್) ಮೆನೇಜಿಂಗ್ ಡೈರೆಕ್ಟರ್  ರಾಜು ಶೇಖರನ್ ಎಂಬವರನ್ನು ಈ ಪ್ರಕರಣದಲ್ಲಿ  ಸಿಬಿಐ ಬಂಧಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಸಿಬಿಐಯ ಹೈದರಾಬಾದ್ ವಿಭಾಗದ ಜಂಟಿ ನಿರ್ದೇಶಕ ವೀರೇಶ್ ಪ್ರಭು, ಸಿಬಿಐಯ ವಿಶಾಖಪಟ್ಟಣಂ ಎಸ್‌ಪಿ ಮುರಳಿ ರಾಂಬ, ವಿಶಾಖಪಟ್ಟಣಂ ಡಿಐಜಿ ಗೋಪಿನಾಥ್ ಜೆಟ್ಟಿ, ಗುಂಟೂರು ಐಜಿ ಸರ್ವಶ್ರೀ ತ್ರಿಪಾಠಿ ಮತ್ತು ಎಪ್‌ಎಸ್‌ಎಸ್‌ಎಐ ಅಧಿಕಾರಿ ಸತ್ಯಕುಮಾರ್ ಪಾಂಡಾ ನೇತೃತ್ವದ ತಂಡ ಈ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಬಂಧನತರನ್ನು  ನಂತರ ತಿರುಪತಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.

ಲಡ್ಡು ಪ್ರಸಾದಕ್ಕಾಗಿರುವ ತುಪ್ಪ ಪೂರೈಕೆ ಸಮಯದಲ್ಲಿ ಗಂಭೀರ ಉಲ್ಲಂಘನೆಗಳು ನಡೆದಿರುವುದನ್ನು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಪ್ರತೀ ಹಂತದಲ್ಲಿ ಅಕ್ರಮ ನಡೆದಿದೆಯೆಂದು ತನಿಖಾ ವರದಿಯಲ್ಲಿ ಸಿಬಿಐ ತಿಳಿಸಿದೆ.

ವೈಷ್ಣವಿ ಡೈರಿಯ ಪ್ರತಿನಿಧಿಗಳು ತುಪ್ಪ ಪೂರೈಕೆಗಾಗಿ  ಎ.ಆರ್ ಡೈರಿ ಎಂಬ ಹೆಸರಲ್ಲಿ  ಸುಳ್ಳು ದಾಖಲೆಗಳು ಮತ್ತು ನಕಲಿ ಮುದ್ರೆ ಬಳಸಿದ್ದಾರೆ. ಉತ್ತರಾಖಂಡದ ರೂರ್ಕಿಯ ಭೋಲೇ ಬಾಬ್ ಡೈರಿಯಿಂದ ತುಪ್ಪವನ್ನು ಪಡೆಯಲಾಗಿದೆಯೆಂದು ಹೇಳಿಕೊಂಡು ವೈಷ್ಣವಿ ಡೈರಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿದೆಯೆಂದೂ ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ  ಎಸ್‌ಟಿಐ ಈ ಹಿಂದೆ ನಾಲ್ವರನ್ನು ಬಂಧಿಸಿತ್ತು. ಅದರ ಬೆನ್ನಲ್ಲೇ ಈ ನಾಲ್ವರನ್ನು ಬಂಧಿಸಲಾಗಿದೆ. ತಿರುಪತಿ ತಿರುಮಲ ಕ್ಷೇತ್ರದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ತುಪ್ಪದ ಬದಲು ದನದ ಕೊಬ್ಬು ಹಾಗೂ ಇತರ ಪ್ರಾಣಿಗಳ ಕೊಬ್ಬುಗಳ ಮಿಶ್ರಣ ನಡೆಸಲಾಗಿದೆಯೆಂಬ ಆಘಾತಕಾರೀ ಅಂಶ ಹೊರಬಂದಾಗ ಅದು ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಭಕ್ತರ  ಮಾತ್ರವಲ್ಲ ಹಿಂದೂ ಧರ್ಮೀಯರ ನಂಬಿಕೆಗೆ ಘಾಸಿ ಹಾಗೂ ಅವಮಾನ ಮಾಡಲಾಗಿದೆಯೆಂದು  ದೇಶವ್ಯಾಪಕ ಭಾರೀ ಆಕ್ರೋಶಗಳು ವ್ಯಕ್ತವಾಗಿತ್ತು.

RELATED NEWS

You cannot copy contents of this page