ದೆಹಲಿಯಲ್ಲಿ ಭಾರೀ ಭಯೋತ್ಪಾದನಾ ಕೃತ್ಯಕ್ಕೆ ಪಾಕ್ ಸಂಚು : . ವಿಫಲಗೊಳಿಸಿದ ಭಾರತೀಯ ಗುಪ್ತಚರ ವಿಭಾಗ ; ಇಬ್ಬರ ಸೆರೆ

ನವದೆಹಲಿ: ರಾಷ್ಟ್ರ ರಾಜಧಾನಿಯಾದ ನವದೆಹಲಿಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್‌ಐ ಭಾರೀ ಭಯೋತ್ಪಾದನಾ ಕೃತ್ಯಕ್ಕೆ ರೂಪು ನೀಡಿದ್ದು, ಅದನ್ನು ಭಾರತೀಯ ಗುಪ್ತಚರ ವಿಭಾಗ ವಿಫಲಗೊಳಿಸಿದೆ.

ಇದಕ್ಕೆ ಸಂಬಂಧಿಸಿ ಪಾಕಿಸ್ತಾನದ  ಬೇಹುಗಾರಿಕಾ ಸಂಸ್ಥೆ ಸದಸ್ಯ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ನಿವಾಸಿ ಅನ್ಸರುಲ್ ಮಿಯಾ ಮತ್ತು ರಾಂಚಿ ನಿವಾಸಿ ಅಖ್‌ಲಖ್ ಅಸಾಂ ಎಂಬವರು ಬಂಧಿತರಾದ ಉಗ್ರರು. ಇವರು ಕಳೆದ ಮೂರು ತಿಂಗಳಿಂದ ದೆಹಲಿಯಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ಹೂಡುತ್ತಿದ್ದರೆಂಬ  ಮಾಹಿತಿ ಭಾರತೀಯ ಗುಪ್ತಚರ ವಿಭಾಗಕ್ಕೆ ಲಭಿಸಿತ್ತು. ಅದರಂತೆ ಆ ಇಬ್ಬರ ಮೇಲೆ  ಗುಪ್ತಚರ ವಿಭಾಗದವರು ಸದಾ ನಿಗಾ ಇರಿಸಿ ಅವರ ಪೂರ್ಣ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಇದರಂತೆ ಕೊನೆಗೂ ಅವರನ್ನು ಬಂಧಿಸಲಾಗಿದೆ. ಭಾರತದ ಹಲವು ದಾಖಲುಪತ್ರಗಳು, ಚಿತ್ರಗಳನ್ನು ಸಂಗ್ರಹಿಸುವ ಉದ್ದೇಶದಿಂದ ನೇಪಾಳ  ನಿವಾಸಿಯಾದ ಉಗ್ರ ಐಎಸ್‌ಐ  ಭಾರತಕ್ಕೆ ಬಂದಿದ್ದ ಮಾಹಿತಿ ಲಭಿಸಿತ್ತು. ಅದರ ಜಾಡು ಹಿಡಿದು ಗುಪ್ತಚರ ವಿಭಾಗ ನಡೆಸಿದ  ಮುಂದಿನ ಕಾರ್ಯಾಚರಣೆಯಲ್ಲಿ ಇನ್ನೋರ್ವ ರಾಂಚಿ ಉಗ್ರನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಇಬ್ಬರು ಉಗ್ರರ ಪೈಕಿ ಅನ್ಸರುಲ್ ಮಿಯಾ  ಖತ್ತರ್‌ನಲ್ಲಿ ಟ್ಯಾಕ್ಸಿ ಚಾಲಕನನ್ನಾಗಿ ಐಎಸ್‌ಐ ನೇಮಿಸಿತ್ತು. ಬಳಿಕ ಆತನನ್ನು 2024ರಲ್ಲಿ ಪಾಕಿಸ್ತಾನದ ರಾವಲ್ಪಿಂಡಿಗೆ ತಲುಪಿಸಿ ಅಲ್ಲಿ ಆತನಿಗೆ ಭಾರತದ ವಿರುದ್ಧ ಬೇಹುಗಾರಿಕೆ ನಡೆಸುವ ತರಬೇತಿ ನೀಡಿತ್ತೆಂದೂ ತನಿಖೆಯಲ್ಲಿ ಸ್ಪಷ್ಟ ಗೊಂಡಿದೆ.ಈ ಇಬ್ಬರು ಉಗ್ರರು ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕೇಂದ್ರವನ್ನೂ ಪದೇ ಪದೇ ಸಂಪರ್ಕಿಸುತ್ತಿದ್ದರೆಂಬ ಮಾಹಿತಿ ಇದೆ.

Leave a Reply

Your email address will not be published. Required fields are marked *

You cannot copy content of this page