ದೆಹಲಿ, ಬಿಹಾರದಲ್ಲಿ ತೀವ್ರ ಭೂಕಂಪ
ನವದೆಹಲಿ: ದೆಹಲಿ ಮತ್ತು ಬಿಹಾರದಲ್ಲಿ ಇಂದು ಮುಂಜಾನೆ ತೀವ್ರ ಭೂಕಂಪ ಸಂಭವಿಸಿದೆ. ಭೂಕಂಪ ಎಷ್ಟು ಪ್ರಬಲವಾಗಿತ್ತೆಂದರೆ ಮನೆಯ ಹಾಸಿಗೆ ಯಿಂದ ಹಿಡಿದು ಕಿಟಕಿ ಮತ್ತು ಮನೆ ಸಾಮಗ್ರಿಗಳೆಲ್ಲಾ ಕೆಲವು ಸೆಕೆಂಡ್‌ಗಳ ಕಾಲ ಅಲುಗಾಡಿದೆ. ದೆಹಲಿಯಲ್ಲಿ ಭೂಕಂಪ ನಡೆದಿದ್ದು ಹತ್ತು ವರ್ಷಗಳ ಬಳಿಕ ಇದು ಮೊದಲ ಬಾರಿಯಾಗಿದೆ.
ಭೂಕಂಪದ ಪರಿಣಾಮವಾಗಿ ಭೂಮಿಯು ಕೆಲವು ಸೆಂಕೆಂಡುಗಳ ಕಾಲ ನಡುಗಿತು. ಆ ವೇಳೆ ಗಾಢ ನಿದ್ರೆಯಲ್ಲಿದ್ದ ಜನರು ಪ್ರಾಣಭಯದಿಂದ ತಮ್ಮ ಮನೆಗಳಿಂದ ಹೊರಕ್ಕೆ ಓಡಲು ಪ್ರಾರಂಭಿಸಿದರು. ಆದರೆ ಭೂಕಂಪದಲ್ಲಿ ಯಾವುದೇ ಹಾನಿಯಾದ ಬಗ್ಗೆ ಇದುವರೆಗೆ ಮಾಹಿತಿ ಲಭಿಸಿಲ್ಲ. ದೆಹಲಿಯ ಹೊರತಾಗಿ ಬಿಹಾರ, ಮೊರದಾಬಾದ್, ಮಥುರಾ, ಆಗ್ರಾ, ಸಹಾರಸ್‌ಪುರ, ಅಲ್ವಾರ್, ಗಾಜಿಯಾಬಾದ್ ಮತ್ತು ಗುರುಗ್ರಾಮ್ ಸೇರಿದಂತೆ ವಿವಿಧ ಪ್ರದೇಶಗಳಲ್ಲೂ ಭೂಕಂಪದ ಅನುಭವವಾಗಿದೆ. ಇಂದು ಮುಂಜಾನೆ ೫.೩೦ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೪ರಷ್ಟು ದಾಖಲಾಗಿದೆ. ದೆಹಲಿಯ ಎನ್‌ಸಿಆರ್ ಪ್ರದೇಶದ ಭೂಮಿಯ ಐದು ಕಿಲೋ ಮೀಟರ್ ಆಳದಲ್ಲಿ ಭೂಕಂಪನದ ಪ್ರಭಾವ ಕೇಂದ್ರವಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನದಿಂದಾಗಿ ಮನೆಗಳ ಗೋಡೆಗಳು, ಕಿಟಕಿಗಳು ಅಲುಗಾಡಲಾರಂಭಿಸಿದ ಹಿನ್ನೆಲೆಯಲ್ಲಿ ಹಲವೆಡೆಗಳಲ್ಲಿ ಗೋಡೆಗಳು ಬಿರುಕುಬಿಟ್ಟಿವೆ. ಜತೆಗೆ ಭೂಮಿಯ ಅಡಿಭಾಗದಿಂದ ಬಾರೀ ಶಬ್ದವೂ ಕೇಳಿ ಬಂದಿದೆ ಎಂದು ಈ ಪ್ರದೇಶದ ಜನರು ತಿಳಿಸಿದ್ದಾರೆ.
ಈಮಧ್ಯೆ ಪ್ರಧಾನಿ ನರೇಂದ್ರ ಮೋದಿ, ಭಯಭೀತರಾಗಬೇಡಿ ಮತ್ತು ಶಾಂತಿ ಕಾಪಾಡಿಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ವಿನಂತಿಸಿಕೊಂಡಿದ್ದಾರೆ.
ಇದು ಮಾತ್ರವಲ್ಲದೆ ಇನ್ನೊಂದೆಡೆ ಬಂಗಾಳಕೊಲ್ಲಿಯಲ್ಲಿ ನಿನ್ನೆ ರಾತ್ರಿ 11.15ಕ್ಕೆ 4.30 ತೀವ್ರತೆಯ ಭೂಕಂಪ ಆದರ 35 ಕಿಲೋ ಮೀಟರ್ ಆಳದಲ್ಲಿ ಇನ್ನೊಂದೆಡೆ ಸಂಭವಿಸಿದೆ. ಅದರ ಬೆನ್ನಲ್ಲೇ ಇಂದು ಮುಂಜಾನೆ ದಿಲ್ಲಿ ಮತ್ತಿತರೆಡೆಗಳಲ್ಲಿ ಈ ಕಂಪನ ಉಂಟಾಗಿದೆ. ಟಿಬೇಟ್‌ನಲ್ಲೂ ನಿನ್ನೆ ವಿವಿಧ ಸಮಯಗಳಲ್ಲಾಗಿ ಐದು ಬಾರಿ ೩.೫ರಿಂದ ೪.೫ರ ನಡುವಿನ ತೀವ್ರತೆಯ ಭೂಕಂಪನ ಸಂಭವಿಸಿತ್ತು.