ನಕಲಿ ಚಿನ್ನಾಭರಣ ತಯಾರಿಸಿ ಮಾರಾಟ ಮಾಡುವ ತಂಡ ಸಕ್ರಿಯ: ಮೂವರ ಸೆರೆ
ಕಣ್ಣೂರು: ತಾಮ್ರ ಹಾಗೂ ಸೀಸದ ವಸ್ತುಗಳಿಗೆ ಚಿನ್ನದ ಲೇಪನ ಮಾಡಿ ಚಿನ್ನಾಭರಣಗಳೆಂದು ನಂಬಿಸಿ ಮಾರಾಟಗೈದು ಹಣ ಲಪಟಾಯಿಸುವ ತಂಡವೊಂದು ಕಣ್ಣೂರಿನಲ್ಲಿ ಸೆರೆಗೀಡಾಗಿದೆ. ತಂಡದ ಮೂರು ಮಂದಿಯನ್ನು ಇದೀಗ ಸೆರೆ ಹಿಡಿಯಲಾಗಿದ್ದು, ಈ ದಂಧೆಯಲ್ಲಿ ಇನ್ನಷ್ಟು ಮಂದಿ ಒಳಗೊಂಡಿದ್ದಾರೆಯೇ ಎಂದು ತನಿಖೆ ನಡೆಯುತ್ತಿದೆ.
ತಲಶ್ಶೇರಿ ಇಲ್ಲಿಕುನ್ನ್ ರಫಿಯಾಯ್ ಹೌಸ್‌ನ ಎಂ. ಸಿರಾಜುದ್ದೀನ್ (೪೧) ಅಳಿಕ್ಕೋಡ್ ಕಪ್ಪಕಡವು ಎಂ.ಎಂ.. ಹೌಸ್‌ನ ಎಂ. ಸುಜೈಲ್ (೪೦), ಇರಿಕ್ಕೂರ್ ಪೆರುವಳತ್ತ್ ಪರಂಬ್ ಯತೀಂಕಾನ ಸಮೀಪದ ಆಸ್ಯಾಸ್ ಹೌಸ್‌ನ ಶಫೀಕ್ (೩೩) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಶಫೀಕ್ ವಂಚನೆಯ ಸೂತ್ರಧಾರನಾಗಿದ್ದಾನೆಂದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ನೇತೃತ್ವದಲ್ಲಿ ನಡೆದ ಚಿನ್ನಾಭರಣ ತಯಾರಿಸಿ ಇತರರನ್ನು ಸೇರಿಸಿ ಮಾರಾಟಗೈದು ವಂಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಕಣ್ಣೂರು ನಗರದ ಜ್ಯುವೆಲ್ಲರಿಯೊಂದಕ್ಕೆ ತಲುಪಿ ನಕಲಿ ಚಿನ್ನಾಭರಣ ಮಾರಾಟಗೈಯ್ಯಲು ಸಿರಾಜುದ್ದೀನ್ ಹಾಗೂ ಸುಜೈಲ್ ಯತ್ನಿಸಿದ್ದಾರೆ. ಇವರ ವರ್ತನೆ ಹಾಗೂ ಆಭರಣಗಳನ್ನು ಪರಿಶೀಲಿಸಿದಾಗ ಅದು ನಕಲಿಯೆಂದು ತಿಳಿದು ಜ್ಯುವೆಲ್ಲರಿ ನೌಕರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಲುಪಿ ಅವರಿಬ್ಬರನ್ನೂ ಸೆರೆ ಹಿಡಿದು ತನಿಖೆಗೊಳಪಡಿಸಿದಾಗ ಶಫೀಕ್‌ನ ಕುರಿತು ಮಾಹಿತಿ ಲಭಿಸಿದೆ. ಆರೋಪಿಗಳು ಇದೇ ರೀತಿಯಲ್ಲಿ ಕಣ್ಣೂರಿನ ಬೇರೊಂದು ಜ್ಯುವೆಲ್ಲರಿಯಲ್ಲೂ ನಕಲಿ ಚಿನ್ನ ಮಾರಾಟಗೈದು ೫೦ ಸಾವಿರ ರೂಪಾಯಿ ವಂಚನೆಗೈದುದಾಗಿ ದೂರಲಾಗಿದೆ. ಅಲ್ಲಿ ಆರೋಪಿಗಳು ಮಾರಾಟಗೈದ ಆಭರಣಗಳನ್ನು ಬಳಿಕ ಪರಿಶೀಲಿಸಿದಾಗ ಅದು ನಕಲಿಯೆಂದು ತಿಳಿದು ಬಂದಿತ್ತು. ಈ ವಿಷಯವನ್ನು ನೌಕರರು ಕೂಡಲೇ ಇತರ ಜ್ಯುವೆಲ್ಲರಿಗಳಿಗೆ ಹಾಗೂ ಪೊಲೀಸರಿಗೆ ತಿಳಿಸಿದರು. ಆ ಬಗ್ಗೆ ತನಿಖೆ ನಡೆಯುತ್ತಿರುವಂತೆ ಮತ್ತೊಂದು ಜ್ಯುವೆಲ್ಲರಿಯಲ್ಲಿ ವಂಚನೆಗೆ ಯತ್ನಿಸಿದ ತಂಡ ಸೆರೆಗೀಡಾಗಿದೆ. ಬಂಧಿತರ ಪೈಕಿ ಶಫೀಕ್ ಈ ಹಿಂದೆ ಗಲ್ಫ್‌ನಲ್ಲಿದ್ದನು. ಅಲ್ಲಿಂದ ಮರಳಿದ ಈತ ಶ್ರೀಕಂಠಪುರದಲ್ಲಿ ಮೊಬೈಲ್ ಫೋನ್ ಅಂಗಡಿ ನಡೆಸುತ್ತಿದ್ದನೆಂದು ತಿಳಿದು ಬಂದಿದೆ.