ನನ್ನನ್ನು ಸೋಲಿಸಿದವರೇ ಮುರಳೀಧರನ್‌ರನ್ನು ಕೂಡಾ ಸೋಲಿಸಿದ್ದಾರೆ-ಪದ್ಮಜಾ
ತ್ರಿಶೂರ್: ನನ್ನನ್ನು ಸೋಲಿಸಿದವರೇ ಕೆ. ಮುರಳೀಧರನ್‌ರನ್ನು ಕೂಡಾ ಜೊತೆಗೆ ನಿಂತು ಸೋಲಿಸಿದ್ದಾರೆಂದು ಪದ್ಮಜಾ ವೇಣುಗೋಪಾಲ್ ನುಡಿದಿದ್ದಾರೆ. ಮುರಳಿಯಣ್ಣನಿಗೆ ನಾನು ಮುನ್ನೆಚ್ಚರಿಕೆ ನೀಡಿದ್ದೇನೆ. ಯಾವುದೇ ಕಾರಣದಿಂದಲೂ ತ್ರಿಶೂರ್‌ನಲ್ಲಿ ಸ್ಪರ್ಧಿಸಬಾರದೆಂದು ತಿಳಿಸಿದ್ದೆ. ತ್ರಿಶೂರ್‌ನಿಂದ ನನಗೆ ಅಳುತ್ತಾ ಹಿಂತಿರುಗಬೇಕಾಗಿ ಬಂದಿದೆ. ಆ ಅನುಭವವೇ ಮುರಳಿಯಣ್ಣನಿಗೂ ಉಂಟಾಗಿದೆ ಎಂದು ಪದ್ಮಜಾ ತಿಳಿಸಿದರು. ಇದೇ ವೇಳೆ ಟಿ.ಎನ್. ಪ್ರತಾಪನ್ ಜೊತೆಗಿದ್ದವರೊ ನಿಮ್ಮನ್ನು ಸೋಲಿಸಿದ್ದು ಎಂಬ ಪ್ರಶ್ನೆಗೆ ಆ ಹೆಸರು ನಾನು ಹೇಳುವುದಿಲ್ಲವೆಂದು ಪದ್ಮಜಾ ನುಡಿದರು.
ಪೂಕುನ್ನಂ ಮುರಳೀ ಮಂದಿರದಲ್ಲಿ ಪತ್ರಕರ್ತರೊಂದಿಗೆ ಪದ್ಮಜಾ ಈ ವಿಷಯ ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ತ್ರಿಶೂರ್‌ನಲ್ಲಿ ನನ್ನ ಜೊತೆಗಿದ್ದು ಸೋಲಿಸಿದವರೇ ಮುರಳೀಧರನ್‌ರನ್ನು ಅಲ್ಲಿಗೆ ಕರೆಸಿ ಸೋಲಿಸಿದ್ದಾರೆ. ಸಹೋದರನನ್ನು ಕರೆದು ತಂದು ಹೊಂಡಕ್ಕೆ ದೂಡಿಹಾಕಿದ್ದು ಯಾರೆಂಬುದನ್ನು ಮುರಳೀಧರನ್‌ರೇ ಹೇಳಬೇಕೆಂದು ಪದ್ಮಜಾ ನುಡಿದರು. ತಂದೆ ೩೫ ವರ್ಷ ತ್ರಿಶೂರ್ ಜಿಲ್ಲೆಯಲ್ಲಿ ವಿಧಾನಸಭಾ ಸದಸ್ಯರಾಗಿದ್ದರು. ಕಾಂಗ್ರೆಸ್‌ನ ಕೆಲವರು ಅಲ್ಲಿ ಸಮಸ್ಯೆಗೆ ಕಾರಣರಾಗಿದ್ದಾರೆ. ಈಗ ಕಾಂಗ್ರೆಸ್‌ನ ಅಧಿಕಾರ ಒಂದು ಗುಂಪಿನ ಕೈಯಲ್ಲಿದೆ. ಅಂತವರನ್ನು ದೂರ ಮಾಡಿದರೆ ಕಾಂಗ್ರೆಸ್ ಬಚಾವಾಗಲಿದೆ.
ಮುರಳೀಧರನ್‌ರನ್ನು ಬಿಜೆಪಿಗೆ ಆಹ್ವಾನಿಸಬೇಕಾದ ಅಗತ್ಯವಿಲ್ಲ. ಅವರೇ ಬುದ್ಧಿವಂತಿಕೆಯಿಂದ ತೀರ್ಮಾನ ಕೈಗೊಳ್ಳುವರು. ಕಾಂಗ್ರೆಸ್ ತೊರೆಯಲಿರುವ ನನ್ನ ತೀರ್ಮಾನ ತಪ್ಪಾಗಲಿಲ್ಲವೆಂಬುವುದರಲ್ಲಿ ನನಗೆ ಸಂತೋಷವಿದೆ ಎಂದು ಪದ್ಮಜಾ ನುಡಿದರು.