ನಿಲಂಬೂರು ಸಹಿತ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಮತದಾನ ಆರಂಭ; ನಿಲಂಬೂರು ಎಡರಂಗ ಮತ್ತು ಐಕ್ಯರಂಗಕ್ಕೆ ಅಗ್ನಿಪರೀಕ್ಷೆ
ತಿರುವನಂತಪುರ: ಕೇರಳದ ನಿಲಂಬೂರು ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳಲ್ಲಾಗಿ ಐದು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಕ್ಷೇತ್ರಗಳ ಸಂಖ್ಯೆ ಸೀಮಿತವಾಗಿದ್ದರೂ ಈ ಉಪ ಚುನಾವಣೆಯಲ್ಲಿ ಕೇರಳದಲ್ಲಿ ಆಡಳಿತ ಒಕ್ಕೂಟವಾದ ಎಡರಂಗ ಮತ್ತು ವಿರೋಧಪಕ್ಷವಾದ ಐಕ್ಯ ರಂಗಕ್ಕೆ ಇದು ಒಂದು ಅಗ್ನಿ ಪರೀಕ್ಷೆಯಾಗಿದೆ. ನಿಲಂಬೂರಿನ ಹೊರತಾಗಿ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಗುಜರಾತಿನ ನಾಲ್ಕು ವಿಧಾನಸಭಾಕ್ಷೇತ್ರಗಳಿಗೂ ಇಂದು ಉಪಚುನಾವಣೆ ನಡೆಯು ತ್ತಿದೆ. ಈ ನಾಲ್ಕು ಕ್ಷೇತ್ರಗಳ ಫಲಿತಾಂಶ ಇನ್ನೊಂದೆಡೆ ಕೇಂದ್ರದ ಆಡಳಿತಾರೂಢ ಎನ್ಡಿಎ ಮತ್ತು ಇಂಡಿಯಾ ಒಕ್ಕೂಟಕ್ಕೂ ಮಹತ್ವದ್ದಾಗಿದೆ.
ನಿಲಂಬೂರು ವಿಧಾನಸಭಾ ಕ್ಷೇತ್ರಕ್ಕೆ ಇಂದು ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊAಡಿದ್ದು, ಉತ್ತಮ ರೀತಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 10 ಗಂಟೆ ತನಕದ ಅವಧಿಯಲ್ಲಿ ಶೇ. 20 ಮಂದಿ ಮತ ಚಲಾಯಿಸಿದ್ದಾರೆ. ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಪ್ರಧಾನವಾಗಿ ಎಡರಂಗದ ಎಂ. ಸ್ವರಾಜ್, ಯುಡಿಎಫ್ನ ಆರ್ಯಾಂಡನ್ ಶೌಕತ್ ಮತ್ತು ತೃಣಮೂಲ ಕಾಂಗ್ರೆಸ್ನ ಪಿ.ವಿ. ಅನ್ವರ್ರ ನಡುವೆ ಪ್ರಧಾನ ಪೈಪೋಟಿ ಏರ್ಪಟ್ಟಿದೆ. ಆದ್ದರಿಂದ ಚುನಾವಣಾ ಫಲಿತಾಂಶ ಈ ಮೂರು ರಾಜಕೀಯ ಪಕ್ಷಗ ಳಿಗೂ ಅತೀ ನಿರ್ಣಾಯಕ ವಾಗಿದೆ. ಇನ್ನು ಬಿಜೆಪಿ ಅಭ್ಯರ್ಥಿ ಮೋಹನ್ ಜೋರ್ಜ್ ಕೂಡಾ ಗೆಲುವಿನ ತುಂಬು ನಿರೀಕ್ಷೆಯಿರಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 10 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಜೂನ್ 23ರಂದು ಮತ ಎಣಿಕೆ ನಡೆಯಲಿದೆ. ನಿಲಂಬೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,32,381 ಮತದಾರರಿದ್ದಾರೆ. 263 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಇದರಲ್ಲಿ 1,13,613 ಪುರುಷರು, 1,18,760 ಮಹಿಳೆಯರು ಮತ್ತು 8 ಮಂಗಳಮುಖಿಯರು ಒಳಗೊಂಡಿದ್ದಾರೆ.