ಪೆರ್ಮುದೆಯಲ್ಲಿ ಬಸ್ ತಂಗುದಾಣವಿಲ್ಲ: ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗೆ ಜನಪ್ರತಿನಿಧಿ ಮನವಿ
ಪೆರ್ಮುದೆ: ಮಲೆನಾಡು ಹೆದ್ದಾರಿ ಅಭಿವೃದ್ಧಿಗೊಂಡ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ದಿನಂಪ್ರತಿ ಸಂಚರಿಸುವ ವಾಹನಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಉಂಟಾಗಿದೆ. ಬಸ್‌ಗಳು ಕೂಡಾ ವಿವಿಧ ಕಡೆಗಳಿಗೆ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಧರ್ಮತ್ತಡ್ಕ, ಸೀತಾಂಗೋಳಿ, ಬಂದ್ಯೋಡು ಮೊದಲಾದ ಭಾಗಗಳಿಗೆ ತೆರಳುವ ರಸ್ತೆಗಳು ಸಂಗಮಿಸುವ ಪೆರ್ಮುದೆ ಪೇಟೆ ಈ ರಸ್ತೆಯಲ್ಲಿ ಸಿಗುವ ಪ್ರಮುಖ ಪೇಟೆಗಳಲ್ಲೊಂದಾಗಿದೆ. ಆದರೆ ಇಲ್ಲಿ ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಸಹಿತ ನಿತ್ಯದ ಪ್ರಯಾಣಿಕರು ಬಸ್ ತಂಗುದಾಣವಿಲ್ಲದೆ ಅಂಗಡಿಗಳ ವರಾಂಡದಲ್ಲಿ ಅಥವಾ ಇತರ ಕಡೆಗಳಲ್ಲಿ ನಿಂತು ಪಾಡು ಪಡುತ್ತಿದ್ದಾರೆ. ಮಳೆಗಾಲದಲ್ಲಿ ಈ ಸಮಸ್ಯೆ ಜಟಿಲವಾಗಿದೆ. ಪೆರ್ಮುದೆ ಪೇಟೆಯಲ್ಲಿ ಕೂಡಲೇ ಬಸ್ ತಂಗುದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಪಂಚಾಯತ್‌ನ ೧ನೇ ವಾರ್ಡ್ ಪ್ರತಿನಿಧಿ ಗಂಗಾಧರ ಮುಖ್ಯಮಂತ್ರಿಗೆ ಆನ್‌ಲೈನ್ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.