ಪೊಲೀಸರ ಗುಪ್ತ ಕಾರ್ಯಾಚರಣೆ: ನಕಲಿ ಸರ್ಟಿಫಿಕೇಟ್ ನಿರ್ಮಿಸುವ ಕೇಂದ್ರ ಪತ್ತೆ
ಕಾಸರಗೋಡು: ಪೊಲೀಸರು ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಹೊಸದುರ್ಗದಲ್ಲಿ ಕಾರ್ಯವೆಸಗುತ್ತಿದ್ದ ನಕಲಿ ಸರ್ಟಿಫಿಕೇಟ್ ಹಾಗೂ ದಾಖಲೆಪತ್ರಗಳನ್ನು ನಿರ್ಮಿಸುವ ಗುಪ್ತ ಕೇಂದ್ರಗಳನ್ನು ಪತ್ತೆಹಚ್ಚಿದ್ದಾರೆ.
ಇದಕ್ಕೆ ಸಂಬಂಧಿಸಿ ಹೊಸದುರ್ಗ ಕಡಪ್ಪುರದ ಶಿಹಾಬ್ (38), ಮುಳಿಕ್ಕಾಂ ಕ್ಲಾಯಿಕೋಡಿನ ಪಿ. ರವೀಂದ್ರನ್ (51) ಮತ್ತು ಹೊಸದುರ್ಗ ಕೊವ್ವಲ್‌ಪಳ್ಳಿಯ ಸಂತೋಷ್ ಕುಮಾರ್ (45) ಎಂಬವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಟಿ. ಅಖಿಲ್ ನೇತೃತ್ವದ ಪೊಲೀಸರು ನಿನ್ನೆ ಈ ಕಾರ್ಯಾಚರಣೆ ನಡೆಸಿದ್ದಾರೆ.
ನೆಟ್ ಫಾರ್ ಯೂ ಕೆಫೆ ಹಾಗೂ ಬಂಧಿತರಾದ ಆರೋಪಿಗಳ ಪೈಕಿ ಶಿಹಾಬ್‌ನ ಮನೆಯಲ್ಲಿ ಈ ನಕಲಿ ಸರ್ಟಿಫಿಕೇಟ್ ನಿರ್ಮಾಣ ಕೇಂದ್ರಗಳನ್ನು ಪತ್ತೆಹಚ್ಚಲಾಗಿದೆ. ಕೇರಳ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ನಕಲಿ ಸರ್ಟಿ ಫಿಕೇಟ್‌ಗಳು, ಡ್ರೈವಿಂಗ್ ಲೈಸನ್ಸ್‌ಗಳು, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಇತ್ಯಾದಿ ನಕಲಿ ದಾಖಲುಪತ್ರಗಳನ್ನು ಇಲ್ಲಿ ನಿರ್ಮಿಸಲಾಗುತ್ತಿತ್ತು. ಈಬಗ್ಗೆ ನಡೆಸಲಾದ ಹೆಚ್ಚಿನ ತನಿಖೆಯಲ್ಲಿ 1800ಕ್ಕೂ ಹೆಚ್ಚು ನಕಲಿ ಸರ್ಟಿ ಫಿಕೇಟ್‌ಗಳು ಹಾಗೂ ಇತರ ನಕಲಿ ದಾಖಲುಪತ್ರಗಳನ್ನು ಈ ಕೇಂದ್ರದಲ್ಲಿ ನಿರ್ಮಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಕಣ್ಣೂರು, ಕಲ್ಲಿಕೋಟೆ, ಕೇರಳ ವಿಶ್ವವಿದ್ಯಾಲಯ ಹಾಗೂ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ ಸರ್ಟಿ ಫಿಕೇಟ್‌ಗಳನ್ನು ಈ ಜಾಲದವರು ಅತೀ ಹೆಚ್ಚು ನಿರ್ಮಿಸಿದ್ದಾರೆ. ಕರ್ನಾಟಕದ ಹಾಗೂ ವಿವಿಧ ಆರ್‌ಟಿಒ ಕಚೇರಿಗಳ ನಕಲಿ ಸೀಲುಗಳು, ಹಲವು ನಕಲಿ ಡ್ರೈವಿಂಗ್ ಲೈಸನ್ಸ್‌ಗಳನ್ನು ಶಿಹಾಬ್‌ನ ಮನೆಯಿಂದ ಪತ್ತೆಹಚ್ಚಲಾಗಿದೆ. ಇದರ ಹೊರತಾಗಿ ನಕಲಿ ಪಾಸ್‌ಪೋರ್ಟ್ ಹಾಗೂ ಆಧಾರ್ ಕಾರ್ಡ್‌ಗಳೂ ಪತ್ತೆಯಾ ಗಿವೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಇನ್ನೋರ್ವ ಆರೋಪಿ ಸಂತೋಷ್ ಕುಮಾರ್‌ನ ಕಂಪ್ಯೂಟರ್ ಕೇಂದ್ರಕ್ಕೂ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನೋರ್ವ ಆರೋಪಿ ರವೀಂದ್ರನ್ ತನ್ನ ಕಂಪ್ಯೂಟರ್ ಸೆಟ್‌ನಲ್ಲಿ ನಕಲಿ ಸರ್ಟಿಫಿಕೇಟ್‌ಗಳ ಮಾದರಿಗಳನ್ನು ತನ್ನ ಮನೆಯಲ್ಲೇ ತಯಾರಿಸಿ ಅದನ್ನು ಆತ ಶಿಹಾಬ್‌ಗೆ ಕಳುಹಿಸಿಕೊಡು ತ್ತಿದ್ದನೆಂದೂ ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.