ಫೋಕ್ಸೋ ಪ್ರಕರಣದ ಆರೋಪಿ ಬ್ಲೇಡ್ ನುಂಗಿ ಆಸ್ಪತ್ರೆಗೆ
ತಿರುವನಂತಪುರ: ಜೈಲಿನಿಂದ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ಮಧ್ಯೆ ಫೋಕ್ಸೋ ಪ್ರಕರಣದ ಆರೋಪಿ ಬ್ಲೇಡ್ ನುಂಗಿದ್ದು, ಈತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸುಮೇಶ್ ಎಂಬ ವ್ಯಕ್ತಿ ಬ್ಲೇಡ್ ನುಂಗಿದ್ದಾನೆ. ತಿರುವನಂತಪುರ ಜಿಲ್ಲಾ ಜೈಲಿನಿಂದ ಕೊಲ್ಲಂನ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದ ಮಧ್ಯೆ ಘಟನೆ ನಡೆದಿದೆ. ತಾನು ಬ್ಲೇಡ್ ನುಂಗಿರುವುದಾಗಿ ಸುಮೇಶ್ ಜೊತೆಗಿದ್ದ ಪೊಲೀಸರಲ್ಲಿ ತಿಳಿಸಿದ್ದಾನೆ. ನ್ಯಾಯಾಲಯಕ್ಕೆ ಕರೆದೊಯ್ಯದಂತೆ ಮಾಡಲು ಆರೋಪಿ ನಡೆಸುವ ನಾಟಕ ಇದಾಗಿದೆಯೆಂದು ಪೊಲೀಸರು ಶಂಕಿಸಿದ್ದರು. ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದ್ದಾರೆನ್ನಲಾಗಿದೆ. ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಯಾವುದೋ ಲೋಹದ ವಸ್ತು ನುಂಗಿರುವುದಾಗಿ ತಿಳಿದುಬಂ ದಿದ್ದು, ಬಳಿಕ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆರೋಪಿಗೆ ಬ್ಲೇಡ್ ಎಲ್ಲಿಂದ ಸಿಕ್ಕಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.