ಬಾಲಕನಿಗೆ ಸಲಿಂಗರತಿ ಕಿರುಕುಳ ಪ್ರಕರಣ: ಅಪರಾಧಿಗೆ 107 ವರ್ಷ ಸಜೆ, 4.5 ಲಕ್ಷ ರೂ. ಜುಲ್ಮಾನೆ
ಕಾಸರಗೋಡು: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು ಪೋಕ್ಸೋ ಹಾಗೂ ಇತರ ವಿವಿಧ ಸೆಕ್ಷನ್ ಗಳಲ್ಲಾಗಿ ಒಟ್ಟು 107 ವರ್ಷ ಕಠಿಣ ಸಜೆ ಹಾಗೂ 4.5 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕೂಡ್ಲು ಪೆರಿಯಡ್ಕದ ಜಗನ್ನಾಥ ಅಲಿಯಾಸ್ ಜಗನ್ (41) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದೂವರೆ ವರ್ಷ ಹೆಚ್ಚುವರಿ ಕಠಿಣ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
ಕೂಲಿ ಕಾರ್ಮಿಕನಾಗಿರುವ ಆರೋಪಿ 2020 ಆಗಸ್ಟ್ನಿಂದ ಸೆಪ್ಟಂಬರ್ ೨೬ರ ನಡುವಿನ ಅಪ್ರಾಪ್ತ ಬಾಲಕನಿಗೆ ವಿವಿಧ ದಿನಗಳಲ್ಲಾಗಿ ಸಲಿಂಗ ರತಿ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಕಾಸರ ಗೋಡು ಪೊಲೀಸರು ಆತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಅಂದು ಕಾಸರಗೋಡು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಪಿ. ರಾಜೇಶ್ ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಎ.ಕೆ. ಪ್ರಿಯ ನ್ಯಾಯಾಲಯದಲ್ಲಿ ವಾದಿಸಿದ್ದರು.