ಯುವಮೋರ್ಛಾ ನೇತಾರ, ತಂದೆ ನಿಗೂಢ ಸಾವು: ಶಬ್ಧ ಸಂದೇಶ ಕುರಿತು ತನಿಖೆ
ಕುಂಬಳೆ: ಯುವಮೋರ್ಛಾ ನೇತಾರ ಹಾಗೂ ಆತನ ತಂದೆ ನಿಗೂಢ ರೀತಿಯಲ್ಲಿ ಸಾವಿಗೀಡಾದ ಘಟನೆಗೆ ಸಂಬಂಧಿಸಿ ಪ್ರಚಾರ ಮಾಡಲಾದ ಶಬ್ದ ಸಂದೇಶದಲ್ಲಿ ಆರೋಪಿಸಲ್ಪಟ್ಟ ವ್ಯಕ್ತಿಗಳು ಯಾರು? ಈ ಇಬ್ಬರ ಸಾವಿನಲ್ಲಿ ಶಬ್ದ ಸಂದೇಶದಲ್ಲಿ ತಿಳಿಸಲಾದ ನಾಲ್ಕು ಮಂದಿಯ ಪಾತ್ರವೇನು? ಈ ಪ್ರಶ್ನೆಗಿರುವ ಉತ್ತರ ಏನೆಂಬ ಬಗ್ಗೆ ಸಿಗದೆ ಸಂಬಂಧಿಕರು ಹಾಗೂ ನಾಗರಿಕರು ಗೊಂದಲಕ್ಕೀಡಾದ ಬೆನ್ನಲ್ಲೇ ಗುಪ್ತಚರ ವಿಭಾಗಗಳು ತನಿಖೆ ಆರಂಭಿಸಿರುವುದಾಗಿ ಸೂಚನೆಯಿದೆ.
ಬಂಬ್ರಾಣ ಕಲ್ಕುಳದ ಮೂಸ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಲೋಕನಾಥ (೫೧) ಎರಡು ದಿನಗಳ ಹಿಂದೆ ಉಳ್ಳಾಲ ಸೋಮೇಶ್ವರ ಕಡಪ್ಪುರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಪುತ್ರನೂ, ಯುವಮೋರ್ಛಾ ಕುಂಬಳೆ ಮಂಡಲ ಕಮಿಟಿ ಉಪಾಧ್ಯಕ್ಷರಾದ ರಾಜೇಶ್ (೩೦) ಕಳೆದ ತಿಂಗಳ ೧೦ರಂದು ನಾಪತ್ತೆಯಾಗಿದ್ದು, ಹುಡುಕಾಟ ವೇಳ ೧೨ರಂದು ಉಳ್ಳಾಲ ಬೆಂಗರೆ ಸಮುದ್ರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಿಗೂಢ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಾಗರಿಕರು ಕ್ರಿಯಾ ಸಮಿತಿ ರೂಪೀಕರಿಸಿದ್ದರು.
ಮಗನ ಸಾವಿನ ನಿಗೂಢತೆಗಳ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿ ಲೋಕನಾಥ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ಅವರ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಪತ್ತೆ ಯಾಗಿತ್ತು. ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿದ್ದಾರೆಂದು ಪ್ರಾಥ ಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಸಾವಿಗೀಡಾಗುವುದರ ಅಲ್ಪ ಮುಂಚೆ ಅವರು ಸ್ನೇಹಿತರ ಸಹಿತ ಕೆಲವರಿಗೆ ಶಬ್ದ ಸಂದೇಶ ಕಳುಹಿಸಿದ್ದರು. ತನ್ನ ಹಾಗೂ ಮಗನ ಸಾವಿಗೆ ನಾಲ್ಕು ಮಂದಿ ಕಾರಣ ಎಂದೂ ಅವರ ಹೆಸರನ್ನು ಸಂದೇಶದಲ್ಲಿ ಉಲ್ಲೇಖಿಸಿರುವುದಾಗಿ ಹೇಳಲಾಗುತ್ತಿದೆ.