ರಸ್ತೆ ಬದಿ ತ್ಯಾಜ್ಯರಾಶಿ: ದುರ್ವಾಸನೆ, ರೋಗಭೀತಿ
ಉಪ್ಪಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಕೊಳೆತು ದುರ್ವಾ ಸನೆಯಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗಿದ್ದರೂ ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆರೋಪಿಸಿ ದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಸೋಂಕಾಲು- ನಯಾಬಜಾರ್ ರಸ್ತೆಯ ಕುದುಕೋಟಿ ಎಂಬಲ್ಲಿ ತ್ಯಾಜ್ಯ ರಾಶಿ ಸ್ಥಳೀಯರ ನಿದ್ದೆಗೆಡಿಸಿದ್ದು, ಮಾರಕ ರೋಗಭೀತಿ ಉಂಟಾಗಿದೆ. ಹಲವಾರು ತಿಂಗಳಿಂದ ನಿರಂತರ ತ್ಯಾಜ್ಯವನ್ನು ತಂದು ಇಲ್ಲಿ ಉಪೇಕ್ಷಿಸಲಾಗುತ್ತಿದೆ. ಮನೆಗಳಲ್ಲಿ ಉಪಯೋಗಶೂನ್ಯಗೊಂಡ ಆಹಾರ ಪದಾರ್ಥಗಳು ಸಹಿತ ವಿವಿಧ ತ್ಯಾಜ್ಯಗಳನ್ನು ಇಲ್ಲಿ ತಂದು ಎಸೆಯಲಾಗುತ್ತಿದ್ದು, ಇಲ್ಲಿನ ಚರಂಡಿಯಲ್ಲಿ ತ್ಯಾಜ್ಯ ತುಂಬಿ ರಸ್ತೆಯಲ್ಲಿ ಹರಡಿಕೊಂಡಿದೆ. ಮಳೆ ಸುರಿಯುವ ವೇಳೆ ನೀರು ತ್ಯಾಜ್ಯದೊಂದಿಗೆ ಮಿಶ್ರಣಗೊಂಡು ರಸ್ತೆಯಲ್ಲೇ ಹರಿಯತ್ತಿದೆ. ಇದು ಪಾದಚಾರಿಗಳು ಹಾಗೂ ಸ್ಥಳೀಯರ ಸಮಸ್ಯೆಗೆ ಕಾರಣವಾಗಿದೆ. ಈ ದಾರಿಯಾಗಿ ಸೋಂಕಾಲು, ಪ್ರತಾಪನಗರ, ಅಂಬಾರು, ಚೆರುಗೋಳಿ, ನಯಾಬಜಾರ್ ಸಹಿತ ಹಲವೆಡೆಗಳಿಂದ ದಿನನಿತ್ಯ ನೂರಾರು ಮಂದಿ ಸಂಚರಿಸುತ್ತಿದ್ದು, ತ್ಯಾಜ್ಯ ತೆರವುಗೊಳಿಸಿ ಇಲ್ಲಿ ಸಿಸಿಕ್ಯಾಮರಾ ಅಳವಡಿಸಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಲ್ಲಿ ಸಾರ್ವಜನಿಕರು ಆಗ್ರಹಿಸಿದ್ದಾರೆ.