ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ
ನವದೆಹಲಿ: ರಾಜ್ಯಸಭೆಯಲ್ಲಿ ಬಹುಮತಕ್ಕಾಗಿ ದಶಕಗಳಿಂದ ಪ್ರಯತ್ನಿ ಸುತ್ತಿದ್ದ ಬಿಜೆಪಿ ನೇತೃತ್ವದ ಎನ್‌ಡಿಎಗೆ ಕೊನೆಗೂ ಸ್ಪಷ್ಟ ಬಹುಮತ ಲಭಿಸಿದೆ. ಇನ್ನು ಮುಂದೆ ಯಾವುದೇ ಅಡ್ಡಿ ಇಲ್ಲದೆ ರಾಜ್ಯಸಭೆಯಲ್ಲಿ ಮಸೂದೆಗಳ ಅಂಗೀಕಾರ ಸುಗಮವಾಗಲಿದೆ. ಈವರೆಗೆ ಲೋಕಸಭೆಯಲ್ಲಿ ಮಸೂದೆ ಅಂಗೀಕರಿ ಸಲ್ಪಟ್ಟರೂ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತವಾಗಿ ಅವುಗಳು ಅಲ್ಲೇ ಬಾಕಿ ಉಳಿದುಕೊಳ್ಳುವಂತಿತ್ತು. ಮುಂದೆ ಅದಕ್ಕೆ ಆಸ್ಪದವಿಲ್ಲದಂತೆ ಎನ್‌ಡಿಎಯ ಹಾದಿ ಸುಗಮಗೊಂಡಿದೆ. ರಾಜ್ಯಸಭಾ ಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆ ಯಲ್ಲಿ ಬಿಜೆಪಿಯ 9 ಮತ್ತು ಎನ್‌ಡಿಎ ಮಿತ್ರಪಕ್ಷದ ಇಬ್ಬರು ಸದಸ್ಯರು ಹಾಗೂ ಕಾಂಗ್ರೆಸ್‌ನ ಓರ್ವ ಸದಸ್ಯ ಅವಿರೋ ಧವಾಗಿ ಆಯ್ಕೆಗೊಂಡಿದ್ದಾರೆ. ಹೊಸ ದಾಗಿ 9 ಮಂದಿಯ ಆಯ್ಕೆಯೊಂದಿಗೆ ಬಿಜೆಪಿಯ ಸಂಖ್ಯಾಬಲ ಈಗ 96 ಕ್ಕೇರಿದೆ. ಆ ಮೂಲಕ ಒಟ್ಟಾರೆಯಾಗಿ ಎನ್‌ಡಿಎ ಸದಸ್ಯಬಲ 112ಕ್ಕೆ ತಲುಪಿದೆ. ರಾಜ್ಯಸಭೆಯು 245 ಸ್ಥಾನ ಹೊಂದಿದ್ದು, ಅದರಲ್ಲಿ ಸದ್ಯ ಕಾಶ್ಮೀರದ ೪ ಮತ್ತು ನಾಮನಿರ್ದೇಶಿತ ೪ ಸ್ಥಾನಗಳು ಖಾಲಿ ಬಿದ್ದಿವೆ. ಹೀಗಾಗಿ ಪ್ರಸ್ತುತ ಸಂಖ್ಯಾಬಲ 237 ಆಗಿದೆ. ಬಹುಮತ ಬೇಕಿದ್ದಲ್ಲಿ 119 ಸ್ಥಾನ ಅಗತ್ಯ. ಎನ್‌ಡಿಎ ಬಲ ಈಗ 112ಕ್ಕೇರಿದೆ. ಅದರ ಜೊತೆಗೆ 6 ನಾಮನಿರ್ದೇಶಿತ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿಯ ಬೆಂಬಲವಿರುವ ಹಿನ್ನೆಲೆಯಲ್ಲಿ ಎನ್‌ಡಿಎ ಬಲ ಈಗ 119ಕ್ಕೇರಿ ಸರಳ ಬಹುಮತಕ್ಕೆ ತಲುಪಿದೆ. ತೆಲಂಗಾನದಿಂದ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಅವಿರೋಧವಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಇಂಡಿಯಾ ಒಕ್ಕೂಟದ ಬಲ ಈಗ 84ರಿಂದ 85ಕ್ಕೇರಿದೆ.