ರೋಡ್‌ಶೋ ವೇಳೆ ರಥಕ್ಕೆ ವಿದ್ಯುತ್ ತಂತಿ ಸ್ಪರ್ಶ ದೊಡ್ಡ ಅಪಾಯದಿಂದ ಅಮಿತ್ ಶಾ ಪಾರು
ಜೈಪುರ: ರಾಜಸ್ಥಾನ ವಿಧಾನಸಭೆಗೆ ನಡೆಯಲಿರುವ ಚುನಾವಣಾ ಪ್ರಚಾರದಂಗವಾಗಿ ರಾಜಸ್ತಾನದ ಪರ್ಬನ ಡಂಗೋಲಿ ಮೊಹಲ್ಲಾದ ಎರಡು ಬದಿಗಳಲ್ಲೂ ಅಂಗಡಿಗಳು ಮತ್ತು ಮನೆಗಳಿರುವ ರಸ್ತೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಥದ ಮೂಲಕ ರೋಡ್ ಶೋ ನಡೆಸುತ್ತಿದ್ದ ವೇಳೆ ಆಕಸ್ಮಾತ್ ವಿದ್ಯುತ್ ತಂತಿಯೊಂದು ಕಡಿದು ರಥದ ಮೇಲೆ ಬಿದ್ದು ಸಚಿವರು ಅದೃಷ್ಟವಶಾತ್ ಭಾರೀ ಅಪಾಯದಿಂದ ಪಾರಾಗಿದ್ದಾರೆ.
ಅಮಿತ್ ಶಾ ಜೊತೆಗಿದ್ದ ಭದ್ರತಾ ಪಡೆಗಳು ಮತ್ತು ಪೊಲೀಸರು ತಕ್ಷಣ ಆ ಪ್ರದೇಶವನ್ನೆಲ್ಲಾ ಸುತ್ತುವರಿದು ವಿದ್ಯುತ್ ಆಫ್ ಮಾಡಿದರು. ಚುನಾವಣಾ ಪ್ರಚಾರಕ್ಕಾಗಿ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಈ ರಥ ನಿರ್ಮಿಸಲಾಗಿತ್ತು. ಕಡಿದು ಬಿದ್ದ ವಿದ್ಯುತ್ ತಂತಿ ರಥದ ಮೇಲೆ ಬಿದ್ದು ಬೆಂಕಿ ಕಿಡಿ ಎದ್ದಿದೆ. ಭದ್ರತಾ ಪಡೆಗಳು ತಕ್ಷಣ ರಥವನ್ನು ನಿಲ್ಲಿಸಿ ಸಂಭಾವ್ಯ ಭಾರೀ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಘಟನೆ ನಡೆದ ಬಳಿಕ ಅಮಿತ್ ಶಾ ರೋಡ್ ಶೋ ರದ್ದುಪಡಿಸಿ ಅಲ್ಲಿಂದ ಕಾರಿನಲ್ಲಿ ತೆರಳಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿರ್ದೇಶ ನೀಡಿದ್ದಾರೆ.