ರ‍್ಯಾಗಿಂಗ್: ಮೂವರು ವಿದ್ಯಾರ್ಥಿಗಳ ವಿರುದ್ಧ ಕೇಸು
ಕಾಸರಗೋಡು: ಪೆರಿಯಾದ ಡಾ. ಅಂಬೇಡ್ಕರ್ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿನ ಜ್ಯೂನಿಯರ್ ವಿದ್ಯಾರ್ಥಿಯೋರ್ವನನ್ನು ರ‍್ಯಾಗಿಂಗ್ ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬೇಕಲ ಪೊಲೀಸರು ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಥಮ ವರ್ಷ ಪದವಿ ವಿದ್ಯಾರ್ಥಿ ಪೂಂಜಾವಿ ಬೈತಲ್ ಹೌಸ್‌ನ ಮುಹಮ್ಮದ್ ಆದಿಲ್ (೧೯) ಎಂಬಾತ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಅದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳಾದ ಅಜಾಸ್, ಆಸಿಫ್ ಮತ್ತು ಸಲಾಂ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂವರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಿರುವುದಾಗಿ ಕಾಲೇಜು ಅಧಿಕಾರಿಗಳು ಇದೇ ವೇಳೆ ತಿಳಿಸಿದ್ದಾರೆ.
ಫುಲ್‌ಸ್ಲೀವ್ ಅಂಗಿಯ ಒಂದು ಕೈ ಮಾತ್ರ ಮಡಚಿ ಕ್ಯಾಂಟಿನ್‌ಗೆ ಹೋಗಿ ಸ್ನೇಹಿತರನ್ನು ಕರೆದುಕೊಂಡು ಬಾ ಎಂದು ಈ ಸೀನಿಯರ್ ವಿದ್ಯಾರ್ಥಿಗಳು ತನ್ನಲ್ಲಿ ತಿಳಿಸಿದ್ದರೆಂದೂ, ಅದಕ್ಕೆ ತಯಾರಾಗದ ತನ್ನ ಮೇಲೆ ಅವರು ಹಲ್ಲೆ ನಡೆಸಿರುವುದಾಗಿಯೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಆದಿಲ್ ಆರೋಪಿಸಿದ್ದಾನೆ.