ಸಾಮಾಜಿಕ ಜಾಲತಾಣದಲ್ಲಿ ಪರಿಚಯಗೊಂಡ ಯುವತಿಯನ್ನು ವಸತಿಗೃಹಕ್ಕೆ ಕರೆತಂದು ಕೊಲೆ: ಯುವಕ ಸೆರೆ

ಕೊಚ್ಚಿ: ಸಾಮಾಜಿಕ ಜಾಲತಾಣ ದಲ್ಲಿ ಪರಿಚಯಗೊಂಡ ಯುವತಿಯನ್ನು ಯುವಕನೋರ್ವ ಕೊಚ್ಚಿ ನಗರದ ವಸತಿಗೃಹವೊಂದಕ್ಕೆ ಕರೆಸಿ ಅಲ್ಲಿ ಆಕೆಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ.

ಚಂಗನಾಶ್ಶೇರಿ ನಿವಾಸಿ ಹಾಗೂ ಎರ್ನಾಕುಳಂನ ಲ್ಯಾಬ್ ಒಂದರ ಅಟೆಂಡರ್ ಆಗಿರುವ ರೇಷ್ಮಾ (೨೭) ಕೊಲೆಗೈಯ್ಯಲ್ಪಟ್ಟ ಯುವತಿ. ಈ ಕೊಲೆಗೆ ಸಂಬಂಧಿಸಿ ಕಲ್ಲಿಕೋಟೆಯ ಬಾಲುಶ್ಶೇರಿ ನಿವಾಸಿ ನೌಶಾದ್ (೩೧) ಎಂಬಾತನನ್ನು ಪೊಲೀಸರು ಬಂಧಿಸಿ ದ್ದಾರೆ. ಈತ ಕೊಲೆ ನಡೆದ ವಸತಿಗೃಹದ ಕೇರ್‌ಟೇಕರ್ ಕೂಡಾ ಆಗಿದ್ದಾನೆ.

ಕೊಚ್ಚಿ ನಗರದ ವಿಳಿಮರಕರೆಯ ಬಯೋ ಅಪಾರ್ಟ್‌ಮೆಂಟ್‌ನಲ್ಲಿ ನಿನ್ನೆ ರಾತ್ರಿ  ಸುಮಾರು ೧೦ ಗಂಟೆಗೆ ಈ ಕೊಲೆ ಕೃತ್ಯ ನಡೆದಿದೆ. ಆರೋಪಿ ನೌಶಾದ್ ಕೊಲೆಗೈಯ್ಯಲ್ಪಟ್ಟ ರೇಷ್ಮಾಳನ್ನು ಸೋಶ್ಯಲ್ ಮೀಡಿಯಾದ ಮೂಲಕ ಕಳೆದ ಮೂರು ವರ್ಷಗಳ ಹಿಂದೆ ಪರಿಚಯಗೊಂಡಿದ್ದನೆನ್ನಲಾಗಿದೆ. ಆ ಪರಿಚಯದಲ್ಲಿ ಆತ ರೇಷ್ಮಾಳನ್ನು ಎರಡು ದಿನಗಳ ಹಿಂದೆ ತನ್ನ ಅಪಾರ್ಟ್‌ಮೆಂಟ್‌ಗೆ ಕರೆಸಿ ಅಲ್ಲಿ ಆಕೆಯ ಜತೆ ಎರಡು ದಿನ ಕಳೆದಿದ್ದನು. ನಿನ್ನೆ ರಾತ್ರಿ ಅವರಿಬ್ಬರ ನಡುವೆ ಜಗಳ ಉಂಟಾಯಿತೆಂದೂ ಆಗ ಆರೋಪಿ ಚಾಕುವಿನಿಂದ ಆಕೆಗೆ ಇರಿದು ಗಂಭೀರ ಗಾಯಗೊಳಿಸಿದನೆಂದು ಆರೋ ಪಿಸಲಾಗಿದೆ. ಆಗ ಬೊಬ್ಬೆ ಕೇಳಿದ ಯಾರೋ ಆ ಬಗ್ಗೆ ನೀಡಿದ ದೂರಿನಂತೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆ ಕೊಠಡಿಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಷ್ಮಾಳನ್ನು ಆಸ್ಪತ್ರೆಗೆ ಸಾಗಿಸಿದರೂ ಆಕೆಯ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಕೊಲೆಗೆ ಕಾರಣ ಇನ್ನೂ ಸ್ಪಷ್ಟಗೊಂಡಿಲ್ಲ. ಆರೋಪಿ ಪರಸ್ಪರ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾನೆ. ಅದರಿಂದಾಗಿ ಆತನನ್ನು ಸಮಗ್ರ ವಾಗಿ ವಿಚಾರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page