ಸಿಕ್ಕಿಂನಲ್ಲಿ ಮೇಘ ಸ್ಫೋಟ: ೨೩ ಯೋಧರು ಸಹಿತ ಹಲವರು ನಾಪತ್ತೆ
ಗಾಂಗ್ಟರ್: ಭಾರತದ ಈಶಾನ್ಯ ರಾಜ್ಯವಾದ ಸಿಕ್ಕಿಂನ ಉತ್ತರ ಭಾಗದ ಲೋನಾಕ್‌ನಲ್ಲಿ ಮೇಘ ಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ ಭಾರತೀಯ ಸೇನಾ ಪಡೆಯ ೨೩ ಯೋಧರೂ ಸೇರಿದಂತೆ ಹಲವರು ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪತ್ತೆಗೆ ವ್ಯಾಪಕ ಶೋಧ ಆರಂಭಿಸಲಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿಂನಾದ್ಯಂತ ಎಡೆಬಿಡದೆ ಸುರಿಯುತ್ತಿ ರುವ ಭಾರೀ ಮಳೆಯ ಬೆನ್ನಲ್ಲೇ ಮೇಘ ಸ್ಫೋಟ ಉಂಟಾಗಿದೆ. ಇದರಿಂದಾಗಿ ಲಾಚೆನ್ ಕಣಿವೆ ಉದ್ದಕ್ಕೂ ಸ್ಥಾಪಿಸಲಾಗಿದ್ದ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಮೇಘ ಸ್ಫೋಟ ಹಾಗೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚುಂಗ್ತಾಂಗ್ ಅಣೆಕಟ್ಟಿನಲ್ಲಿ ನೀರು ತುಂಬಿ ತುಳುಕಲಾರಂ ಭಿಸಿರುವ ಹಿನ್ನೆಲೆಯಲ್ಲಿ ಅದರಿಂದ ನೀರು ಬಿಡುಗಡೆ ಮಾಡಲಾಗಿತ್ತು. ಇದರ ಪರಿಣಾಮ ನೀರಿನ ಪ್ರವಾಹ ಸಿಂಗ್ಟಾಮ್ ಬಳಿಯ ಬರ್ದಂಗ್‌ನಲ್ಲಿ ನಿರ್ಮಿಸಲಾಗಿದ್ದ ಭಾರತೀಯ ಸೇನಾ ಪಡೆಯ ಶಿಬಿರ ಮತ್ತು ಅಲ್ಲೇ ನಿಲ್ಲಿಸಲಾಗಿದ್ದ ಸೇನೆಯ ವಾಹನಗಳು ದಿಢೀರ್ ಆಗಿ ಪ್ರವಾಹ ನೀರಿನಲ್ಲಿ ಕೊಚ್ಚಿಹೋಗಿ ಶಿಬಿರದಲ್ಲಿದ್ದ ೨೩ ಸೇನಾ ಯೋಧರೂ ನಾಪತ್ತೆಯಾಗಿದ್ದಾರೆ. ಮಾತ್ರವಲ್ಲ ಈ ಪ್ರದೇಶದ ಇನ್ನೂ ಹಲವರು ನಾಪತ್ತೆಯಾಗಿರುವುದಾಗಿ ರಕ್ಷಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಅಧಿಕಾರಿಗಳು ತಿಳಿಸಿದ್ದಾರೆ. ಭೀಕರ ಪ್ರವಾಹಕ್ಕೆ ರಸ್ತೆ ಕೂಡಾ ಕೊಚ್ಚಿಕೊಂಡು ಹೋಗಿದೆ. ಸಾರ್ವಜನಿಕರ ಆಸ್ತಿಗೂ ಭಾರೀ ಹಾನಿ ಉಂಟಾಗಿದೆ. ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದೆ ಎಂದು ಮುಖ್ಯಮಂತ್ರಿ ಪ್ರೇಮ್‌ಸಿಂಗ್ ತಮಾಂಗ್ ಪ್ರವಾಹ ಪೀಡಿತರ ಪ್ರದೇಶಕ್ಕೆ ಭೇಟಿ ನೀಡಿದ ನಂತರ ತಿಳಿಸಿದರು.
ಈ ತೀಸ್ತಾನದಿ ಸಿಕ್ಕಿಂನಿಂದ ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶಕ್ಕೆ ಸಾಗುತ್ತಿದೆ. ಇದರಿಂದಾಗಿ ಎಲ್ಲೆಡೆಗಳಲ್ಲೂ ಜಾಗ್ರತಾ ನಿರ್ದೇಶ ನೀಡಲಾಗಿದೆ.